ನ್ಯೂಸ್ ನಾಟೌಟ್: ಅರ್ಜುನನ ಕಾಲಿಗೆ ಯಾವುದೇ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರೆಲ್ ಚರ್ರೆ ಕೋವಿ ಮಾತ್ರ ಅದರಲ್ಲಿ ಆನೆ ಸಾಯುವುದಿಲ್ಲ ಎಂದು ವನ್ಯಜೀವಿ ವೈದ್ಯ ರಮೇಶ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ. ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಆಗಲು ಹೀಗೆ ಆಗುತ್ತಿತ್ತ ಎಂದು ಹೇಳುವುದು ಕಷ್ಟ ಎಂದಿದ್ದಾರೆ.
ಕಾರ್ಯಾಚರಣೆ ದಿನ ಡಿಸೆಂಬರ್ 4 ರಂದು ನಾನು ಆನೆ ಮಾವುತ ವಿನು, ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಕುಳಿತ್ತಿದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್ಎಫ್ಓ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಶಾಂತ್ ಆನೆಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿತು. ನಾವು ಪ್ರಶಾಂತ್ ಆನೆ ಬಳಿ ಬಂದೆವು. ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಜಗಳಕ್ಕೆ ಬಿದ್ದಿದೆ. ಅರ್ಜುನ ಮಾವುತ ವಿನು ಕೂಡ ನನ್ನೊಟ್ಡಿಗೆ ಇದ್ದಿದ್ದರಿಂದ ಅಲ್ಲಿ ಮತ್ತೊಬ್ಬ ಹುಡುಗ ಅರ್ಜುನನ ಮೇಲಿದ್ದ ಎಂದಿದ್ದಾರೆ.
ನಾವು ವಾಪಸ್ ಬರುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ ಅಷ್ಟೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ. ಅರ್ಜುನ ತಾನು ಪ್ರಾಣ ಬಿಟ್ಟು ನಮ್ಮನ್ನ ಉಳಿಸಿದ್ದಾನೆ. ನಾನು ನಿತ್ಯ ಹೊರ ಬರುವಾಗ ಕೈ ಮುಗಿದು ಬರಬೇಕು ಎಂದು ವೈದ್ಯ ರಮೇಶ್ ಕಣ್ಣೀರಾಗಿದ್ದಾರೆ ಎಂದು ವರದಿ ತಿಳಿಸಿದೆ.