ನ್ಯೂಸ್ ನಾಟೌಟ್ : ಕ್ರಿಸ್ ಮಸ್ ಹಿನ್ನಲೆ ರಜೆ ಇದ್ದುದರಿಂದ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಕಂಡು ಬಂದಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಜನ ತುಂಬಿ ತುಳುಕಿತ್ತು. ಇತ್ತ ದೇವಾಲಯಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು,ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಭಕ್ತರಿಂದ ಗಿಜಿಗುಡುತ್ತಿದ್ದವು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಲಕ್ಷಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವಿಶೇಷವೆಂದರೆ ಷಷ್ಠಿ ಜಾತ್ರೆಯ ದಿನಕ್ಕಿಂತಲೂ ಹೆಚ್ಚು ಭಕ್ತರಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಮುಂಜಾನೆಯೇ ಭಕ್ತರು ಕಿಕ್ಕಿರಿದು ಸೇರಿದ್ದರು. ಭಾನುವಾರ ರಾತ್ರಿ ಬಂದಿದ್ದ ಕೆಲ ಪ್ರವಾಸಿಗರು ದೇವಸ್ಥಾನದ ರಥಬೀದಿಯಲ್ಲೇ ಮಲಗಿದ್ದರು.
ಇತ್ತ ಧರ್ಮಸ್ಥಳದ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ 5 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಯಿತು.ಉಳಿದಂತೆ ಪ್ರವಾಸಿಗರ ಹಾಟ್ ಫೇವರಿಟ್ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ ಬೀಚ್ಗಳಿಗೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು.
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದ ಕಾರಣ ಬಹುತೇಕ ಹೋಟೆಲ್ ಹಾಗೂ ಹೋಮ್ ಸ್ಟೇಗಳಲ್ಲಿ ಕೊಠಡಿಗಳು ಭರ್ತಿಯಾಗಿದ್ದವು. ಲಾಡ್ಜ್ಗಳಲ್ಲಿಯೂ ಬಾಡಿಗೆ ಕೊಠಡಿಯ ದುಬಾರಿ ದರ ಕೇಳಿ ಪ್ರವಾಸಿಗರು ಕಂಗಾಲಾಗಿದ್ದಾರೆ. ಐದಾರು ದಿನಗಳ ಪ್ರವಾಸದ ಯೋಜನೆ ಹಾಕಿಕೊಂಡು ಬಂದ ಕೆಲವರು ವಸತಿ ವ್ಯವಸ್ಥೆ ಆಗದ ಕಾರಣ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮರಳುತ್ತಿದ್ದಾರೆ.