ನ್ಯೂಸ್ ನಾಟೌಟ್ : ದೇವಸ್ಥಾನವೆಂದರೆ ಅದೊಂದು ಪವಿತ್ರವಾದ ಜಾಗ.ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುವ ಪುಣ್ಯ ಸ್ಥಳ.ದೇವರ ಮೇಲೆ ಭಕ್ತಿ ಇರುವವರು ಸದಾ ದೇಗುಲದ ಸುತ್ತ ಮುತ್ತ ಶುಚಿಯನ್ನು ಕಾಪಾಡಲು ಪ್ರಯತ್ನ ಪಡುತ್ತಾರೆ.ಆದರೆ ಇಲ್ಲೊಂದು ದೇವಾಲಯದ ಸ್ಥಿತಿ ನೋಡಿದ್ರೆ ಅಯ್ಯೋ ಅನ್ಸುತ್ತೆ.ಇದಕ್ಕೆ ಕಾರಣವಾಗಿದ್ದು ಕುಡುಕರು..ಹೌದು,ಈ ದೇಗುಲಕ್ಕೆ ಭಕ್ತರಿಗಿಂತ ಹೆಚ್ಚಾಗಿ ಕುಡುಕರೇ ಬಂದು ಭಕ್ತರ ಭಾವನೆಗಳನ್ನು ಕೆರಳಿಸುವಂತೆ ಮಾಡುತ್ತಿದ್ದಾರೆ.
ಹೇಳಿ ಕೇಳಿ ಇದು ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನ. ಆದರೆ ಇಲ್ಲಿಗೆ ಬರುವ ಭಕ್ತರು ಮದ್ಯದ ಬಾಟಲಿಗಳನ್ನೇ ದರ್ಶನ ಮಾಡುವ ಪರಿಸ್ಥಿತಿ ಬಂದೊದಗಿದೆ. ಹೌದು, ಚಿತ್ರಣದಲ್ಲಿ ತೋರಿಸಿರುವಂತೆ ಹೀಗೆ ದೇವಸ್ಥಾನದ ಆವರಣದ ತುಂಬಾ ಬಿದ್ದಿರುವ ಮದ್ಯದ ಬಾಟಲಿಗಳಿಂದ ಭಕ್ತರೇ ಬೇಸತ್ತು ಹೋಗಿದ್ದಾರೆ. ಇದೆಲ್ಲಾ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುತ್ತಿಬಸವೇಶ್ವೇರ ದೇವಸ್ಥಾನದಲ್ಲಿ. ಇತಿಹಾಸ ಪ್ರಸಿದ್ಧವಾದ ಈ ದೇವಾಲಯ ಜಿಲ್ಲಾಡಳಿತ ವ್ಯಾಪ್ತಿಗೆ ಬರುತ್ತದೆ. ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ.ಆದರೆ ದೇವಸ್ಥಾನವನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡ ಕಿಡಿಗೇಡಿಗಳಿಂದಾಗಿ ಇಲ್ಲಿಗೆ ಬರುವ ಭಕ್ತರಿಗೆ ಆತಂಕ ಶುರುವಾಗಿದೆ.
ಯಾವುದೇ ಒಂದು ಘಟನೆ ನಡೆಯೋದಕ್ಕೆ ಆರಂಭ ಅಂತ ಇರುತ್ತೆ.ಅದೇ ರೀತಿ ದೇವಸ್ಥಾನದ ಆವರಣದಲ್ಲಿರುವ ಹೊಟೇಲ್ ಗಳು ಇಲ್ಲಿಗೆ ಬರುವ ಭಕ್ತರಿಗೆ ಉಪಹಾರ ಮಾರಾಟ ಮಾಡುತ್ತಿದ್ದುವು.ಕ್ರಮೇಣ ಅವರು ಹೆಚ್ಚಿನ ಜನ ಬರುವದರಿಂದ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟ ಮಾಡಲು ಶುರು ಮಾಡಿದ್ದಾರೆ. ಇದರಿಂದ ದೇವಸ್ಥಾನದ ಆವರಣದಲ್ಲಿ ಇದೀಗ ಎಣ್ಣೆ ಪಾರ್ಟಿ ಮಾಡುವ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಕುಟುಂಬ ಸಮೇತ ಬರುವ ಭಕ್ತರಿಗೆ ಆತಂಕ ಶುರುವಾಗಿದೆ. ಇಲ್ಲಿನ ಮದ್ಯ ಮಾರಾಟದ ಬಗ್ಗೆ ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ರೂ ನೋ ಯೂಸ್ ಎನ್ನುವದು ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಪವಿತ್ರತೆ ಹಾಳು ಮಾಡುತ್ತಿದ್ದಾರೆ ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆನ್ನುವುದು ಭಕ್ತರ ಒತ್ತಾಯವಾಗಿದೆ.
ಒಟ್ಟಿನಲ್ಲಿ ದೇವಸ್ಥಾನ ಅಂದ್ರೆ ಪವಿತ್ರ ಮಂದಿರ ಅನ್ನೋ ಪದಕ್ಕೆ ಕಪ್ಪು ಮಸಿ ಬಳಿದಂತಾಗಿದೆ.ಈ ಆವರಣದ ಬಳಿಯಲ್ಲೇ ಟಿಫನ್ ಸೆಂಟರ್ ಇಟ್ಟುಕೊಂಡು ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಕೂಡ ಇಲ್ಲಿನ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲು ಮುಂದಾಗದಿರುವುದು ವಿಪರ್ಯಾಸ.ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.