ನ್ಯೂಸ್ ನಾಟೌಟ್: ಹಿಜಾಬ್ ನಿಷೇಧ ಹಿಂದಕ್ಕೆ ತೆಗೆದುಕೊಳ್ಳುತ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಫುಲ್ ಅಲರ್ಟ್ ಆಗಿದೆ.
ಹಿಜಾಬ್ ನಿಷೇಧ ವಾಪಸ್ ಪಡೆಯುವ ಏಕಾಏಕಿ ನಿರ್ಧಾರ ತೆಗೆದುಕೊಳ್ಳಬೇಡಿ, ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಎಂಪಿ ಎಲೆಕ್ಷನ್ ಇದೆ ಎಂದು ಹೈ ಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಹಿಜಾಬ್ ನಿಷೇಧ ಏನಿಲ್ಲ ಈವಾಗ, ನೀವು ಹಿಜಾಬ್ ಹಾಕ್ಕೊಂಡು ಹೋಗಬಹುದು. ತೊಡುವ ಬಟ್ಟೆ, ಊಟ ಅವರವರ ಹಕ್ಕು , ಇದನ್ನು ರಾಜಕೀಯ ಮಾಡೋಕೆ ನಾವು ಹೋಗಲ್ಲ ಎಂದು ಮುಸ್ಲಿಂ ಸಮುದಾಯವನ್ನು ಓಲೈಸುವ ಕೆಲಸಕ್ಕೆ ಸಿಎಂ ಸಿದ್ದು ಕೈ ಹಾಕಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸಿದ್ದು ಹೇಳಿಕೆಯನ್ನು ಕಟು ಪದಗಳಿಂದ ಟೀಕಿಸಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಹೈ ಕಮಾಂಡ್ ಮಧ್ಯ ಪ್ರವೇಶ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ ಮುಂದೆ ಲೋಕ ಸಭಾ ಚುನಾವಣೆ ಇದೆ. ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ರಾಜಕೀಯ ಲಾಭಕ್ಕೆ ಬಳಸಬಹುದು, ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಅನ್ನುವ ಆತಂಕ ಹೈ ಕಮಾಂಡ್ ಗೆ ಇದೆ. ಹೀಗಾಗಿ ನೀವು ಈ ವಿಚಾರದ ಕುರಿತಂತೆ ಏಕಾಏಕಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಸೂಚಿಸಿದೆ. ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ವೋಟ್ ಬ್ಯಾಂಕ್ ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡ್ ಇತರೆ ಸಮುದಾಯಗಳನ್ನೂ ಕೂಡ ಓಲೈಕೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.