ನ್ಯೂಸ್ ನಾಟೌಟ್: ಫೆ.28ರೊಳಗೆ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ 60%ರಷ್ಟು ಕನ್ನಡ ಭಾಷೆ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇಂದು(ಡಿ.28) ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ 10.03.23ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2023ರಲ್ಲಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಜ್ಯಪಾಲರು ಕೂಡ ಅಂಕಿತ ಹಾಕಿದ್ದಾರೆ. ಆದರೆ ರೂಲ್ ಫ್ರೇಮ್ ಆಗಿರಲಿಲ್ಲ. ಅದರಂತೆ ಸೆಕ್ಷನ್ 17(6)ರಂತೆ ಸರ್ಕಾರದ ಅಥವಾ ಸ್ಥಳೀಯ ಪದಾಧಿಕಾರಿಗಳ ಅನುಮೋದನೆಯೊಂದಿಗೆ ವಾಣಿಜ್ಯ, ಕೈಗಾರಿಕೆ, ಅಂಗಡಿ, ಸಮಾಲೋಚನಾ ಕೇಂದ್ರಗಳು, ಹೊಟೇಲ್ಗಳು ಹೆಸರುಗಳನ್ನು ಪ್ರದರ್ಶಿಸುವ ಬೋರ್ಡ್ನ ಅರ್ಧ ಭಾಗ ಕನ್ನಡದಲ್ಲಿ ಇರಬೇಕು ಎಂದಿದೆ. ಈ ಕಾಯ್ದೆಯಲ್ಲಿ 50:50ರ ಅನುಪಾತದಲ್ಲಿ ಕನ್ನಡ, ಆಂಗ್ಲ ಭಾಷೆ ಬಳಕೆಯ ನಿಯಮವಿದೆ ಎಂದು ವಿವರಿಸಿದರು.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ 60:40 ಅನುಪಾತದಲ್ಲಿ ಕನ್ನಡ, ಆಂಗ್ಲ ಭಾಷೆ ಬಳಕೆ ಮಾಡುವ ಬಗ್ಗೆ ನಿಯಮ ಇತ್ತು. 24.03.2018ರಲ್ಲಿ ಈ ಸಂಬಂಧ ನಾವು ಸುತ್ತೋಲೆ ಹೊರಡಿಸಿ, ನಾಮಫಲಕದ 60%ರಷ್ಟು ಭಾಗದಲ್ಲಿ ಕನ್ನಡ ಬಳಸಲು ಹೇಳಲಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ 50:50 ಕನ್ನಡ, ಆಂಗ್ಲ ಬಳಕೆ ಮಾಡುವ ನಿಯಮ ಇತ್ತು. ಈಗ 50:50 ಬದಲು 60:40 ಕನ್ನಡ, ಆಂಗ್ಲ ಭಾಷೆ ಬಳಕೆ ಮಾಡಲು ಕಾನೂನಿಗೆ ತಿದ್ದುಪಡಿ ತರಲು ಸೂಚನೆ ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸೂಚನೆ ನೀಡಿದ್ದೇನೆ ಎಂದರು.
2024ರ ಫೆ.28ರೊಳಗೆ, ಈ ತಿದ್ದುಪಡಿ ಕಾಯ್ದೆಯಂತೆ ಕಾನೂನು ಪಾಲಿಸುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಈ ಕಾಯ್ದೆಯ ನಿಯಮ 17(8)ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು ಎಂದು ತಿಳಿಸಿದ್ದಾರೆ.
ಯಾವುದೇ ಕೈಗಾರಿಕೆ, ಅಂಗಡಿ, ಸಂಸ್ಥೆ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಈ ಅಧಿನಿಯಮದ ಪ್ರಕರಣ 17ರ (6) ರಿಂದ (10) ರವರೆಗಿನ ಉಪಪ್ರಕರಣಗಳ ಉಪಬಂಧಗಳನ್ನು ಪಾಲಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ.
ಮೊದಲನೆಯ ಅಪರಾಧಕ್ಕಾಗಿ ರೂ.5,000 ವರೆಗೆ ದಂಡ ವಿಧಿಸಲಾಗುತ್ತದೆ. ಎರಡನೆಯ ಅಪರಾಧಕ್ಕಾಗಿ ರೂ.10,000ವರೆಗೆ ದಂಡ ಹಾಕಲಾಗುತ್ತದೆ ನಂತರದ ಪ್ರತಿಯೊಂದು ಅಪರಾಧಕ್ಕಾಗಿ ರೂ.20,000 ವರೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಪರವಾನಗಿಯನ್ನೂ ಸಹ ರದ್ದುಗೊಳಿಸಲಾಗುತ್ತದೆ ಎನ್ನಲಾಗಿದೆ.