ನ್ಯೂಸ್ ನಾಟೌಟ್ : ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ವರ್ಷದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 10 ರೂ.ಗಳಷ್ಟು ಕಡಿಮೆ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ ಎನ್ನಲಾಗಿದೆ. ಪೆಟ್ರೋಲಿಯಂ ಸಚಿವಾಲಯವು ಪ್ರತಿ ಲೀಟರ್ ಗೆ 8ರೂ. ದಿಂದ 10 ರೂ. ಗಳಷ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಪ್ರಸ್ತಾವನೆಯನ್ನು ಪ್ರಧಾನಿ ಒಪ್ಪಿಗೆಗಾಗಿ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.
ಈಗಾಗಲೇ ಗ್ಯಾಸ್ ಬೆಲೆ ಇಳಿಸಿರುವ ಮೋದಿ ಸರ್ಕಾರ ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿದೆ. ಇದರಿಂದ ವಾಹನ ಸವಾರರಿಗೆ ಭಾರೀ ನೆಮ್ಮದಿ ಸಿಗಲಿದೆ.
ಕಳೆದ ವರ್ಷ ಏಪ್ರಿಲ್ 6 ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ಸಂಸ್ಕರಣಾ ಪೂರ್ವ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಸಿಎಲ್) ಕಡಿಮೆ ಕಚ್ಚಾ ತೈಲ ಬೆಲೆಯಿಂದಾಗಿ ಭಾರಿ ಲಾಭ ಗಳಿಸಿವೆ ಎನ್ನಲಾಗಿದೆ.
ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ IOC, BPCL ಮತ್ತು HPCL ಒಟ್ಟಾರೆಯಾಗಿ 58,198 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿವೆ. ಕಚ್ಚಾ ತೈಲ ಬೆಲೆಯೂ ಇಳಿಮುಖವಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಲು ಕೇಂದ್ರ ಸಿದ್ಧತೆ ನಡೆಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಹಣಕಾಸು ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯ ಸಿದ್ಧವಿದ್ದರೂ ಪ್ರಧಾನಿ ಕಚೇರಿಯ ಅನುಮತಿಗಾಗಿ ಕಾಯುತ್ತಿವೆ ಎಂದು ವರದಿ ತಿಳಿಸಿದೆ.
ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 101.94 ರೂಪಾಯಿ, ಹೈದರಾಬಾದ್ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 109.66 ರೂಪಾಯಿ, ವಿಶಾಖಪಟ್ಟಣದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 110.48 ರೂಪಾಯಿ, ರಾಜಸ್ಥಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 109.34 ರೂಪಾಯಿ, ಹರಿಯಾಣದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 97.31 ರೂಪಾಯಿ ಆಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಲು ತೈಲ ಕಂಪನಿಗಳೊಂದಿಗೆ ಕೇಂದ್ರ ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸೂಚನೆಗಳಿವೆ. ದೇಶದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ನಿರ್ಧಾರವಾಗುತ್ತಿರುವುದು ಗೊತ್ತೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಯನ್ನು ಆಧರಿಸಿ ತೈಲ ಕಂಪನಿಗಳು ಕಾಲಕಾಲಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ 78.71 ಡಾಲರ್ ತಲುಪಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.