ನ್ಯೂಸ್ ನಾಟೌಟ್: ಸರ್ಕಾರದ ಒಡೆತನದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಸೆನ್ನೆಲ್) ನ ಡೇಟಾ ಸೋರಿಕೆಯಾಗಿದೆಯೆಂಬ ವರದಿ ಎಲ್ಲೆಡೆ ಸುದ್ದಿಯಾಗುತ್ತಿದೆ.
ದಾಳಿಕೋರ ಆಲಿಯಾಸ್ ʼಪೆರೆಲ್ಲ್ʼ ಎಂಬ ಹೆಸರನ್ನು ಹೊಂದಿದ್ದು ಸಂಸ್ಥೆಯ ಬಳಕೆದಾರರ ಮಹತ್ವದ ಮಾಹಿತಿ ತನ್ನ ಬಳಿ ಇದೆ ಎಂದು ಹೇಳಿಕೊಂಡಿದೆ.
ಡಾರ್ಕ್ ವೆಬ್ ಫೋರಂನಲ್ಲಿ ಅದು ಸ್ಯಾಂಪಲ್ ಡೇಟಾಸೆಟ್ ಬಹಿರಂಗಪಡಿಸಿದ್ದು ಅದರಲ್ಲಿ ಫೈಬರ್ ಮತ್ತು ಸ್ಥಿರ ದೂರವಾಣಿ ಬಳಕೆದಾರರ ಸೂಕ್ಷ್ಮ ಮಾಹಿತಿ ಒಳಗೊಂಡಿದೆ.
ಈ ಸ್ಯಾಂಪಲ್ ಡೇಟಾಸೆಟ್ನಲ್ಲಿ ಸುಮಾರು 32,000 ಗೆರೆಗಳಿದ್ದು ಅದರಲ್ಲಿ ಬಳಕೆದಾರರ ಮಾಹಿತಿಯಿದ್ದು ತನ್ನ ಬಳಿ ಇರುವ ಡೇಟಾ ಸೆಟ್ನಲ್ಲಿ ಅಂದಾಜು 29 ಲಕ್ಷ ಬಳಕೆದಾರರ ಮಾಹಿತಿಯಿದೆ ಎಂದೂ ದಾಳಿಕೋರ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಸೋರಿಕೆಯಾದ ಡೇಟಾದಲ್ಲಿ ಇಮೇಲ್ ವಿಳಾಸಗಳು, ಬಿಲ್ಲಿಂಗ್ ವಿವರಗಳು, ಸಂಪರ್ಕ ಸಂಖ್ಯೆ ಮತ್ತು ಇತರ ಸೂಕ್ಷ್ಮ ಮಾಹಿತಿಗಳಾದ ಮೊಬೈಲ್ ಔಟೇಜ್ ದಾಖಲೆಗಳು, ನೆಟ್ವರ್ಕ್ ವಿವರಗಳು, ಗ್ರಾಹಕ ಮಾಹಿತಿ ಇತ್ಯಾದಿ ಸೇರಿವೆ.
ಬಿಎಸ್ಸೆನ್ನೆಲ್ ಡೇಟಾದ ಮೇಲೆ ಸೈಬರ್ ದಾಳಿಯಾಗಿರುವ ಬಗ್ಗೆ ಸರ್ಕಾರದ ಸಂಸ್ಥೆ Cert-In ಗೆ ಮಾಹಿತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.