ನ್ಯೂಸ್ ನಾಟೌಟ್: ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸರ್ಕಾರವನ್ನು ಪ್ರಶ್ನಿಸಲು, ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಸನ್ನದ್ದತೆ ನಡೆಯಬೇಕಿತ್ತು. ಆದರೆ, ಇಲ್ಲಿ ಪಕ್ಷದ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಪಟ್ಟಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ವಿಪರ್ಯಾಸ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಸ್ವಪಕ್ಷಕ್ಕೆ ವಿಪಕ್ಷದಂತಾಗಿದ್ದಾರೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ರಮೇಶ್ ಜಾರಕಿಹೊಳಿ, ಲಿಂಬಾವಳಿ, ವಿ.ಸೋಮಣ್ಣ ಜೊತೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಈ ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಸಹ ಇದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದ್ರೆ, ಉಚಿತ ಮಾತ್ರ ಅಲ್ಲ, ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು(ಡಿಸೆಂಬರ್ 06) ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನಾಗಿಯೇ ದೆಹಲಿಗೆ ಹೋಗಲ್ಲ, ಕರೆ ಬಂದ ಮೇಲೆ ಹೋಗುತ್ತೇನೆ. ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ವಿಪಕ್ಷ ಉಪನಾಯಕನಾಗಿ ಅರವಿಂದ್ ಬೆಲ್ಲದ್ ಆಯ್ಕೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭೆ ವಿಪಕ್ಷ ಉಪನಾಯಕನಿಗೆ ಯಾವ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲಾ ತೀರ್ಮಾನ ವಿಪಕ್ಷ ನಾಯಕ, ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ.
ಉಪನಾಯಕ ಅಂದ್ರೆ ವಿಪಕ್ಷ ನಾಯಕನ ಬಳಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ ಅದೇ ರೀತಿ ಕೂರಬೇಕು ಅಷ್ಟೇ. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.