ನ್ಯೂಸ್ ನಾಟೌಟ್ : ಮಕ್ಕಳಾಗಿಲ್ಲವೆಂದು ಅಪರಿಚಿತರ ಮನೆ ಮುಂದೆ ಹೋಗಿ ಮಕ್ಕಳನ್ನು ಕದ್ರೆ ಆ ಮಗುವಿನ ತಂದೆ-ತಾಯಿಗೆ ಹೇಗನ್ನಿಸಬೇಡ..ಇಂತಹ ಮನಕಲಕುವ ಘಟನೆಯೊಂದು ಬೆಂಗಳೂರಿನಿಂದ ವರದಿಯಾಗಿದೆ.ಹೌದು,ಇಬ್ಬರು ಮಕ್ಕಳನ್ನು ಕದ್ದೊಯ್ದು ಪರಾರಿಯಾಗಿದ್ದ ದಂಪತಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಕೂಲಿ ಅರಸಿ ಬೆಂಗಳೂರು ನಗರಕ್ಕೆ ಬಂದಿದ್ದ ಬಲರಾಮ್ ದಂಪತಿ, ಕೊಡಿಗೇಹಳ್ಳಿ ಸಮೀಪ ನೆಲೆಸಿತ್ತು. ಇವರಿಗೆ ಮಕ್ಕಳಾಗಿರಲಿಲ್ಲ. ಈ ವೇಳೆ ಸಂತಾನವಿಲ್ಲದೆ ನೋವು ಅನುಭವಿಸುತ್ತಿದ್ದರು. ಮಕ್ಕಳನ್ನು ಕಂಡಾಗ ಸಂಕಟ ಇನ್ನೂ ಜಾಸ್ತಿಯಾಗುತ್ತಿತ್ತು.ಹೀಗಾಗಿ ಅಲ್ಲಿದ್ದ ಅಪರಿಚಿತರ ಮಕ್ಕಳನ್ನು ಕಳವು ಮಾಡಿ ತಮ್ಮೂರಿಗೆ ಪರಾರಿಯಾಗಲು ಆರೋಪಿಗಳು ಸಂಚು ರೂಪಿಸಿದ್ದರು.ಅಲ್ಲೇ ಸಮೀಪ ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಹೆಣ್ಣು ಮಗು ಹಾಗೂ 8 ತಿಂಗಳ ಗಂಡು ಮಗವನ್ನು ಮಂಗಳವಾರ ಬೆಳಗ್ಗೆ 11.30ರಲ್ಲಿ ಅಪಹರಿಸಿದ ಆರೋಪಿಗಳು, ರಾತ್ರಿ ರೈಲಿನಲ್ಲಿ ಬಿಹಾರಕ್ಕೆ ಪರಾರಿಯಾಗಲು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆರೋಪಿಗಳು ತೆರಳಿದ್ದರು.ಆ ವೇಳೆ ಪ್ರಮೀಳಾ ಮಡಿಲಿನಲ್ಲಿದ್ದ 8 ತಿಂಗಳ ಕಂದಮ್ಮ ಹಸಿವಿನಿಂದ ಅಕ್ರಂದನ ಮಾಡಿದೆ. ಮಗುವಿನ ರೋಧನ ಕೇಳಿ ಪ್ರಯಾಣಿಕರು ಜಮಾಯಿಸಿದ್ದಾರೆ. ಅದೇ ವೇಳೆ ಅಲ್ಲಿಗೆ ರೈಲ್ವೆ ಪೊಲೀಸರು ಧಾವಿಸಿದ್ದಾರೆ. ಆಗ ಪ್ರಮೀಳಾಳ ನಡವಳಿಕೆ ಮೇಲೆ ಶಂಕೆಗೊಂಡು ಪೊಲೀಸರು ವಿಚಾರಿಸಿದಾಗ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ.
ಅಷ್ಟರಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾಗಿದ್ದರಿಂದ ಕಂಗಲಾದ ಮಕ್ಕಳ ಪೋಷಕರು, ಕೂಡಲೇ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ದಂಪತಿ ಚಲನವಲನ ದೃಶ್ಯ ಪತ್ತೆಯಾಗಿದೆ.
ಈ ಸುಳಿವು ಆಧರಿಸಿ ಕೊಡಿಗೇಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದರು. ಕೂಡಲೇ ಮಕ್ಕಳನ್ನು ರಕ್ಷಿಸಿ ಪೋಷಕರ ಮಡಲಿಗೆ ಸುರಕ್ಷಿತವಾಗಿ ಸೇರಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.