ನ್ಯೂಸ್ ನಾಟೌಟ್ : ಪ್ರಧಾನಿ ನರೇಂದ್ರ ಮೋದಿ ಶನಿವಾರ (ಡಿ.30) ಅಯೋಧ್ಯೆಗೆ ಭೇಟಿ ನೀಡುವ ಮೂಲಕ ರಾಮಮಂದಿರ (Ram Mandir) ಉದ್ಘಾಟನೆಗೆ ಮೊದಲು ಅಯೋಧ್ಯೆ ವಿಮಾನ ನಿಲ್ದಾಣ (Ayodhya Airport) ಉದ್ಘಾಟನೆ ಮಾಡಿದ್ದಾರೆ. ಅಯೋಧ್ಯೆ ಭೇಟಿ ವೇಳೆ ನರೇಂದ್ರ ಮೋದಿ ಮೀರಾ ಮಾಂಝಿ (Meera Manjhi) ಎಂಬ ಮಹಿಳೆಯೊಬ್ಬರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ.
ಮೀರಾ ಮಾಂಝಿ ಒಬ್ಬಳು ಗೃಹಿಣಿಯಾಗಿದ್ದು, ಅಯೋಧ್ಯೆಯಲ್ಲಿ ಪತಿ, ಅತ್ತೆ-ಮಾವ ಹಾಗೂ ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಇವರು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆದ ಮಹಿಳೆ ಎನಿಸಿದ್ದಾರೆ. ಹಾಗಾಗಿ, ನರೇಂದ್ರ ಮೋದಿ ಮೀರಾ ಮಾಂಝಿ ಮನೆಗೆ ದಿಢೀರನೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಅವರ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದು, ಹಾಗೆಯೇ, ಅವರ ಮನೆಯಲ್ಲಿ ಚಹಾ ಕೂಡ ಕುಡಿದರು.
“ನರೇಂದ್ರ ಮೋದಿ ನಮ್ಮ ಮನೆಗೆ ಆಗಮಿಸಿ ಅರ್ಧ ಗಂಟೆ ಕಾಳ ಕಳೆದರು. ಅವರು ನನ್ನ ಕುಟುಂಬಸ್ಥರೊಂದಿಗೆ ಮಾತನಾಡಿದರು. ಉಜ್ವಲ ಯೋಜನೆಯ ಲಾಭದ ಬಗ್ಗೆ ಕೇಳಿದರು. ಹಾಗೆಯೇ ಅಡುಗೆ ಏನು ಮಾಡಿದ್ದೀರಿ ಎಂದರು. ಅನ್ನ, ದಾಲ್ ಮಾಡಿದ್ದೇನೆ ಎಂಬುದಾಗಿ ಉತ್ತರಿಸಿದೆ. ನನಗೊಂದು ಕಪ್ ಟೀ ಕೊಡಿ ಎಂದು ಕೇಳಿದರು. ಚಳಿಗಾಲದಲ್ಲಿ ಟೀ ಕುಡಿಯುವುದೇ ಪರಮಾನಂದ ಎಂದು ಹೊಗಳಿದರು. ಚಹಾ ಹೇಗಿದೆ ಎಂದು ನಾನು ಕೇಳಿದ್ದಕ್ಕೆ, ಚಹಾ ಚೆನ್ನಾಗಿದೆ. ಆದರೆ, ಸಕ್ಕರೆ ಸ್ವಲ್ಪ ಜಾಸ್ತಿಯಾಗಿದೆ ಎಂಬುದಾಗಿ ತಿಳಿಸಿದರು” ಎಂದು ಮೀರಾ ಮಾಂಝಿ ಮಾಧ್ಯಮಗಳಿಗೆ ಮುಗ್ಧವಾಗಿ ಉತ್ತರಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ (BPL) ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯೇ ಪಿಎಂ ಉಜ್ವಲ ಯೋಜನೆಯಾಗಿದೆ.