ನ್ಯೂಸ್ ನಾಟೌಟ್: ಅರೇಬಿಕ್ ಶಾಲೆಯ ಶಿಕ್ಷಕರಿಗೆ ಸರ್ಕಾರಿ ವೇತನವನ್ನು ನೀಡುತ್ತಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರೇಬಿಕ್ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸೇವೆ ಹೊರದೇಶಗಳಿಗೆ ಹೆಚ್ಚಾಗಿ ಸಿಗುತ್ತಿರುವುದರಿಂದ ಇವರಿಗೆ ಸರ್ಕಾರಿ ವೇತನ ಏಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಯತ್ನಾಳ್, ಅರೇಬಿಕ್ ಶಾಲೆಗಳ ನಿರ್ವಹಣೆಗಾಗಿ ಎಷ್ಟು ಸರ್ಕಾರಿ ಕಟ್ಟಡಗಳು, ಸರ್ಕಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದ ಬೊಕ್ಕಸದಿಂದ ಪ್ರತಿ ವರ್ಷ ಎಷ್ಟು ಮೊತ್ತ ವಿನಿಯೋಗ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಅರೇಬಿಕ್ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಹೆಚ್ಚಿನ ಸೇವೆಯು ನಮ್ಮ ದೇಶಕ್ಕೆ ದೊರಕುತ್ತಿದೆಯಾ? ಹೊರ ದೇಶಕ್ಕೆ ಲಾಭವಾಗುವುದಕ್ಕೆ ಸರ್ಕಾರಿ ವೇತನ ನೀಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದಲ್ಲಿ ಪ್ರಸ್ತುತ ಅನುದಾನಿತ ಅರೇಬಿಕ್ ಶಾಲೆಗಳು 110 ಇವೆ. ಅನುದಾನ ರಹಿತ ಅರೇಬಿಕ್ ಶಾಲೆಗಳು 72 ಇವೆ. ಅನುದಾನಿತ ಅರೇಬಿಕ್ ಶಾಲೆಗಳಲ್ಲಿ 16,346 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಅನುದಾನ ರಹಿತ ಅರೇಬಿಕ್ ಶಾಲೆಗಳಲ್ಲಿ 6711 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಒಟ್ಟು ಶಿಕ್ಷಕರ ಸಂಖ್ಯೆ 341 ಇವೆ ಎಂದು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.
ಅರೇಬಿಕ್ ಶಾಲೆಗಳ ಕಟ್ಟಡಗಳ ನಿರ್ವಹಣೆಗಾಗಿ ಸರ್ಕಾರದ ವತಿಯಿಂದ ಯಾವುದೇ ಮೊತ್ತ ನೀಡಲಾಗುತ್ತಿಲ್ಲ. ಆದರೆ ಅನುದಾನಿತ ಶಿಕ್ಷಕರ ವೇತನಕ್ಕೆ ವಾರ್ಷಿಕ 25.38 ರೂ ಕೋಟಿ ಮೊತ್ತ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡಲು 15.11 ಲಕ್ಷ ರೂ ಮೊತ್ತ ವಿನಿಯೋಗ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಾಹಿತಿ ನೀಡಿದ್ದಾರೆ.