ನ್ಯೂಸ್ ನಾಟೌಟ್ : ಅಮೆರಿಕದಲ್ಲಿ ಹಿಂದೂಗಳ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಮತ್ತು ಅವರ ಸಮಸ್ಯೆಗಳನ್ನು ಆಲಿಸುವುದಕ್ಕೆ ಅಮೆರಿಕ ಕಾಂಗ್ರೆಸ್ ನಲ್ಲಿ ಪ್ರಸ್ತಾಪಿಸಲು ಕಾಂಗ್ರೆಷನಲ್ ಹಿಂದೂ ಕಾಕಸ್ ಆರಂಭಿಸುವುದಕ್ಕೆ ರಿಪಬ್ಲಿಕನ್ ಪಕ್ಷದ ಸಂಸದಾರದ ಪೀಟ್ ಸೆಷನ್ಸ್ ಮತ್ತು ಎಲಿಸ್ ಸ್ಟೆಫಾನಿಮ್ ಘೋಷಿಸಿದ್ದಾರೆ.
ವೈವಿಧ್ಯಮಯವಾದ ಈ ಕಾಕಸ್ ಭಾರತ, ನೇಪಾಳ, ಶ್ರೀಲಂಕಾ, ಇಂಡೋನೇಷ್ಯಾ, ಬಾಂಗ್ಲಾದೇಶ, ಭೂತಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಯುನೈಟೆಡ್ ಕಿಂಗ್ಡಮ್ ಮತ್ತು ನೆದರ್ ಲೆಂಡ್ ಸೇರಿದಂತೆ ವಿವಿಧ ದೇಶಗಳ ಹಿಂದೂಗಳನ್ನು ಪ್ರತಿನಿಧಿಸುತ್ತದೆ. ಇದು ಸಿಖ್ಖರು, ಜೈನರು ಮತ್ತು ಬೌದ್ಧರಂತಹ ಭಾರತೀಯ ಮೂಲದ ಇತರ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಸದಸ್ಯರನ್ನು ಸಹ ಒಳಗೊಂಡಿದೆ ಎಂದು ಹೇಳಿಕೆ ತಿಳಿಸಿದೆ.
ಕಾಂಗ್ರೆಷನಲ್ ಹಿಂದೂ ಕಾಕಸ್, ಮುಕ್ತ ಉದ್ಯಮ, ಹಣಕಾಸಿನ ಶಿಸ್ತು, ಬಲವಾದ ಕೌಟುಂಬಿಕ ಮೌಲ್ಯಗಳು ಮತ್ತು ನಿರಂಕುಶ ಪ್ರಭುತ್ವಗಳ ವಿರುದ್ಧ ದೃಢವಾದ ವಿದೇಶಾಂಗ ನೀತಿಯ ನಿಲುವನ್ನು ಪ್ರತಿಪಾದಿಸುತ್ತದೆ ಅನ್ನುವುದು ವಿಶೇಷ. ಈ ಬಗ್ಗೆ ಮಾತನಾಡಿದ ಸಂಸದ ಪೀಟ್ ಸೆಷನ್ಸ್ ‘ಕಾಂಗ್ರೆಷನಲ್ ಹಿಂದೂ ಕಾಕಸ್ ನ ಉದ್ಘಾಟನೆಯು ರಾಜಧಾನಿಯಲ್ಲಿ ಇರುವ ಹಿಂದೂ-ಅಮೆರಿಕನ್ ಸಮುದಾಯದ ಧ್ವನಿಯನ್ನು ಗುರುತಿಸುವ ಮತ್ತು ವರ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ನಾವು ಅವರ ಕಳವಳಗಳನ್ನು ಪರಿಹರಿಸಲು, ಅವರ ಕೊಡುಗೆಗಳನ್ನು ಸಂಭ್ರಮಿಸಲು ಮತ್ತು ದೃಷ್ಟಿಕೋನಗಳನ್ನು ಉನ್ನತ ಮಟ್ಟದಲ್ಲಿ ಪರಿಗಣಿಸಲು ಬದ್ಧರಾಗಿದ್ದೇವೆ’ ಎಂದು ಸೆಷನ್ಸ್ ಹೇಳಿದರು. ಪೀಟ್ ಸೆಷನ್ಸ್ ಮತ್ತು ಸ್ಟೆಫಾನಿಮ್ ಅವರ ಅಧ್ಯಕ್ಷತೆಯಲ್ಲಿ, ಹಿಂದೂ-ಅಮೆರಿಕನ್ ಸಮುದಾಯದ ಮೌಲ್ಯಗಳನ್ನು ಕಾಕಸ್ ಪ್ರತಿನಿಧಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.