ನ್ಯೂಸ್ ನಾಟೌಟ್: ಆಧಾರ್ಕಾರ್ಡ್, ಪಾನ್ಕಾರ್ಡ್ ಯಾರಿಗಾದರು ಕೊಡುವಾಗ ಎಚ್ಚರವಹಿಸೊದು ಬಹಳ ಅಗತ್ಯ. ಆಧಾರ್ ಮತ್ತು ಪಾನ್ ಕಾರ್ಡ್ ನಮ್ಮ ಹೆಸರು, ಜನ್ಮ ದಿನಾಂಕದಿಂದ ಹಿಡಿದು ಎಲ್ಲ ದಾಖಲೆಗಳನ್ನೂ ಹೊಂದಿರುತ್ತವೆ ಮತ್ತು ಅವುಗಳನ್ನು ಬಳಸಿ ಬೇರೆ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು.
ದಾಖಲೆ ನಕಲು ಮಾಡಿ 20 ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು 20 ಲಕ್ಷ ರೂ. ಸಾಲ ಮಂಜೂರು ಮಾಡಿಕೊಂಡು ದುಷ್ಕರ್ಮಿಗಳು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವಂಚನೆಗೆ ಒಳಗಾದ ಕಿಶೋರ್ ಎಂಬುವವರು ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ಖಾಸಗಿ ಬ್ಯಾಂಕ್ ಸಿಬ್ಬಂದಿ ಹಾಗೂ ಸಾಲ ಕೊಡಿಸುವ ಏಜೆಂಟ್ ಮೃತ್ಯುಂಜಯ ಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಮದು ವರದಿ ತಿಳಿಸಿದೆ.
ಕಳೆದ ನವೆಂಬರ್ನಲ್ಲಿ ಕಿಶೋರ್ ಸಾಲ ಪಡೆಯುವ ಸಲುವಾಗಿ ತಮ್ಮ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಸಿಬ್ಬಂದಿ ಬಳಿ ವಿಚಾರಿಸಿದ್ದರು. ಈ ವೇಳೆ ಬ್ಯಾಂಕ್ ಸಿಬ್ಬಂದಿ ಸಿಬಿಲ್ ಸ್ಕೋರ್ ಕಡಿಮೆ ಇದ್ದು, ಈಗಾಗಲೇ ಎರಡು ಪ್ರತ್ಯೇಕ ಬ್ಯಾಂಕ್ಗಳಲ್ಲಿ20 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಕಿಶೋರ್, ಹೆಚ್ಚಿನ ವಿವರ ಕಲೆಹಾಕಿದಾಗ ಕಸ್ತೂರಿ ನಗರದಲ್ಲಿರುವ ಖಾಸಗಿ ಬ್ಯಾಂಕ್ನಲ್ಲಿ ಡಿಸೆಂಬರ್ನಲ್ಲಿ 15 ಲಕ್ಷ ರೂ. ಸಾಲ ಪಡೆದ ಹಾಗೂ ರಾಜಾರಾಮ್ ಮೋಹನ್ ರಸ್ತೆಯಲ್ಲಿರುವ ಮತ್ತೊಂದು ಬ್ಯಾಂಕ್ನಲ್ಲಿ 5 ಲಕ್ಷ ರೂ. ಸಾಲ ಪಡೆದ ವಿವರ ಸಿಕ್ಕಿತ್ತು ಎನ್ನಲಾಗಿದೆ.
ವಾಸ್ತವದಲ್ಲಿ ಈತ ಸಾಲವನ್ನೇ ಪಡೆದಿರಲಿಲ್ಲ. ಜತೆಗೆ, ಸಾಲ ನೀಡಿದ್ದ ಬ್ಯಾಂಕ್ಗಳಲ್ಲಿ ಅವರ ಹೆಸರಿನ ಯಾವುದೇ ಬ್ಯಾಂಕ್ ಖಾತೆಗಳಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಾಲ ಮಂಜೂರು ಮಾಡಿದ್ದ ಬ್ಯಾಂಕ್ಗಳ ಬಳಿ ತೆರಳಿ ಕಿಶೋರ್ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವೇಳೆ ಮೃತ್ಯುಂಜಯ ಕುಮಾರ್ ಎಂಬುವವರು ಕಿಶೋರ್ ಪಾನ್ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆ ನೀಡಿ ಸಾಲ ಪಡೆದಿರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿಯೂ ಶಾಮೀಲಾಗಿ ಸಾಲ ಮಂಜೂರು ಮಾಡಿ ತನಗೆ ಅನ್ಯಾಯ ಮಾಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ ಎನ್ನಲಾಗಿದೆ.