ನ್ಯೂಸ್ ನಾಟೌಟ್ : ನಿಜಕ್ಕೂ ಇದೊಂದು ದೇವರ ಪವಾಡವೆಂದೇ ಹೇಳಬಹುದು.ಎಷ್ಟೋ ಸಲ ಇಂದಿಗೂ ಅಚ್ಚರಿಯ ಘಟನೆಗಳು ನಡಿತಾನೇ ಇರುತ್ತವೆ.ಕೆಲವೊಮ್ಮೆ ಇದನ್ನು ಊಹಿಸಿಕೊಳ್ಳೋದು ಕಷ್ಟ.ಹೌದು,ಇಲ್ಲೊಂದು ಘಟನೆಯನ್ನು ನೋಡಿದಾಗ ಆ ಹೆಣ್ಣು ಮಗುವಿನ ಮೇಲೆ ಆ ರಾಯರ ಆಶೀರ್ವಾದ ಇದೆಯೇನೋ ಅನ್ನಿಸತೊಡಗಿದೆ. ಸುಮಾರು ಆರು ತಿಂಗಳಿಂದ ಎರಡೂ ಕಾಲು ಸ್ವಾಧೀನವಿಲ್ಲದೆ ಪರದಾಡುತ್ತಿದ್ದ ಯುವತಿಯೊಬ್ಬಳು ರಾಯರ ಮಠಕ್ಕೆ ಬಂದ ತಕ್ಷಣ ಎದ್ದು ಓಡಾಡಿರುವ ಘಟನೆ ಕೋಟೆ ನಾಡಿನಲ್ಲಿ ನಡೆದಿದೆ. ಮಠಕ್ಕೆ ಬರುತ್ತಿದ್ದಂತೆ ವ್ಹೀಲ್ ಚೇರ್ನಲ್ಲಿ ಕೂತಿದ್ದ ಯುವತಿ ನಡೆದಾಡೋ ಶಕ್ತಿ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಇದು ರಾಯರ ಪವಾಡ ಎಂದು ಯುವತಿಯ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ ಮತ್ತು ಅರುಣಾ ದಂಪತಿ ಪುತ್ರಿ ತೇಜಸ್ವಿನಿ, ರಕ್ತನಾಳ ಸಮಸ್ಯೆಯಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಳು. 6 ತಿಂಗಳಿಂದ ನಡೆದಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಹೀಲ್ ಚೇರ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ, ರಾಯರ ಮಠಕ್ಕೆ ಬಂದ ವೇಳೆ ಯುವತಿ ಮೇಲೆದ್ದು ಯಾರ ಸಹಾಯವಿಲ್ಲದೆ ನಡೆದಾಡಿದ್ದು, ಮೂರು ಪ್ರದಕ್ಷಿಣೆ ಹಾಕಿದ್ದಾಳೆ. ಇದು ಅಲ್ಲಿ ನೆರೆದಿದ್ದ ಭಕ್ತರಲ್ಲಿಯೇ ಭಾರಿ ಅಚ್ಚರಿ ಉಂಟುಮಾಡಿದೆ.
ಶ್ರೀಕಾಂತ್ ಮತ್ತು ಅರುಣಾ ದಂಪತಿಗೆ ತೇಜಸ್ವಿ ಮತ್ತು ಸಾಗರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ವಿಶೇಷ ಚೇತನರಾಗಿದ್ದು, 19 ವರ್ಷದ ತೇಜಸ್ವಿನಿ ಹುಟ್ಟಿದಾಗಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾಳೆ. ಜತೆಗೆ ರಕ್ತನಾಳಗಳ ಸಮಸ್ಯೆಯೂ ಕಾಡತೊಡಗಿತು. ಕಳೆದ 3 ವರ್ಷದಿಂದ ಋತುಚಕ್ರದಲ್ಲೂ ಏರು-ಪೇರಾದ ಹಿನ್ನೆಲೆಯಲ್ಲಿ 6 ತಿಂಗಳಿನಿಂದ ಕಾಲುಗಳಲ್ಲಿ ಸಂಪೂರ್ಣ ಸ್ವಾಧೀನ ಇಲ್ಲದಂತಾಯಿತು.
ದೀಪಾವಳಿ ಸಂದರ್ಭದಲ್ಲಿ ಪಾಲಕರೊಂದಿಗೆ ಯುವತಿ ಮಂತ್ರಾಲಯಕ್ಕೆ ಹೋಗಿದ್ದಳು. ರಾಯರ ದರ್ಶನ ಪಡೆದು ಮರಳುವಾಗ ಅಲ್ಲಿನ ಸ್ವಾಮೀಜಿಗಳು, 45 ದಿನದೊಳಗೆ ಶುಭ ಸುದ್ದಿ ದೊರೆಯಲಿದೆ ಎಂದು ಆಶೀರ್ವದಿಸಿದ್ದರು ಎನ್ನಲಾಗಿದೆ. ಇದಾದ ನಂತರ ಶಿವಮೊಗ್ಗದ ಆಯುರ್ವೇದ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಯುವತಿಯನ್ನು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಚಿತ್ರದುರ್ಗದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬಂದ ವೇಳೆ ಯುವತಿ ಎದ್ದು ಓಡಾಡಿದ್ದಾಳೆ.ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.