ನ್ಯೂಸ್ ನಾಟೌಟ್ :ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿ ವೇಳೆ 11ನೇ ಶತಮಾನಕ್ಕೆ ಸೇರಿದ ಎರಡು ಜೈನ ಶಿಲ್ಪಗಳು ಪತ್ತೆಯಾಗಿವೆ.ಇವುಗಳು ಮುರಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು,ಅವುಗಳನ್ನು ಪುರಾತತ್ವ ಸಂಗ್ರಹಾಲಯಕ್ಕೆ ಉಪನಿರ್ದೇಶಕಿ ಮಂಜುಳಾ ಅವರು ಕಳುಹಿಸಿಕೊಟ್ಟಿದ್ದಾರೆ.
ಕೈ ಹಾಗೂ ಕಾಲುಗಳಲ್ಲಿ ಗೊಮ್ಮಟ್ಟನ ಶಿಲ್ಪ, ಕೇವಲ ತಲೆ ಮಾತ್ರ ಇರುವ ಒಂದು ಶಿಲ್ಪ ಹಾಗೂ ಹೆಣ್ಣು ದೇವರ ಒಂದು ಶಿಲ್ಪ ಪತ್ತೆಯಾಗಿವೆ.ಈ ಶಿಲ್ಪಗಳು ಪತ್ತೆಯಾಗುತ್ತಿದ್ದಂತೆ ಕುತೂಹಲದಿಂದ ಸ್ಥಳೀಯರು ನೋಡಲು ಸ್ಥಳಕ್ಕೆ ಆಗಮಿಸಿದ್ದು, ಡಾ.ಎನ್ಎಸ್ ರಂಗರಾಜು, ಡಾ ಶಶಿಧರ್, ಶ್ರೀ ಪ್ರಸನ್ನ ಕುಮಾರ್ ವಿನೋದ್ ಜೈನ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು.
ಇನ್ನು ಈ ಶಿಲ್ಪಗಳು 11ನೇ ಶತಮಾನದ್ದು ಎನ್ನಲಾಗುತ್ತಿದ್ದು, ಗಂಗರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ವರುಣ, ವಾಜಮಂಗಲ ಹಾಗೂ ವರಕೋಡು ದೊಡ್ಡ ಜೈನ ಕೇಂದ್ರಗಳಾಗಿದ್ದವು. ಈ ಪ್ರದೇಶದಲ್ಲಿ ಹಲವಾರು ಶಿಲ್ಪಕಲೆಗಳಿವೆ ಎಂದು ರಂಗರಾಜು ಅವರು ಹೇಳಿದ್ದಾರೆ.
ಶಿಲ್ಪಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ಉತ್ಖನನದ ಯೋಜನೆಯನ್ನು ಸರ್ಕಾರ ಘೋಷಿಸಬೇಕು. ಉತ್ಖನನಕ್ಕೆ ಸಾಕಷ್ಟು ಅವಕಾಶವಿದ್ದು, ವರುಣಾ ಕ್ಷೇತ್ರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು. ಇದು ಇತಿಹಾಸವನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗೆ ಶಿಲ್ಪಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.