ನ್ಯೂಸ್ ನಾಟೌಟ್ : ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಕಟ್ಟೆಚ್ಚರ ವಹಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಇಲಾಖೆ ಸಿದ್ಧಪಡಿಸುತ್ತಿದೆ.
ಆರೋಗ್ಯ ಇಲಾಖೆಯು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸಮೀಪದ ಸೊಳ್ಳೆಗಳನ್ನು ಲ್ಯಾಬ್ನಲ್ಲಿ ಪರೀಕ್ಷಿಸಿತ್ತು. ಆಗ ಅಲ್ಲಿನ ಸೊಳ್ಳೆಗಳಲ್ಲಿ ಝಿಕಾ ಕಂಡುಬಂದಿದೆ. ಈಗಾಗಲೇ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ. ಆದರೆ ಮನುಷ್ಯರಲ್ಲಿ ರೋಗದ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮ ಸೇರಿದಂತೆ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದೆ.
ಈ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಲಿದೆ. ಅದರಲ್ಲೂ ಮುಖ್ಯವಾಗಿ, ಗರ್ಭಿಣಿಯರು ಸೇರಿದಂತೆ ಇತರರ ಮೇಲೆ ಹೆಚ್ಚು ನಿಗಾ ವಹಿಸುತ್ತಿದೆ. ಜಿಲ್ಲೆಯ ನಾಗರಿಕರಲ್ಲಿ ಝಿಕಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಸೊಳ್ಳೆಗಳ ಮೂಲಕ ಹರಡುವ ಈ ವೈರಸ್ ಹೆಚ್ಚಾಗಿ ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ. ಈ ವೈರಸ್ ಮೊದಲು ಮಗುವನ್ನು ಬಾಧಿಸುತ್ತದೆ. ವೈರಸ್ ಭ್ರೂಣಗಳ ಮೆದುಳಿಗೆ ಕ್ರಮಿಸಿ ಮೈಕ್ರೋ ಸೆಫಾಲಿ ಎಂಬ ಗಂಭೀರ ಜನ್ಮದೋಷಕ್ಕೂ ಕಾರಣವಾಗಬಹುದು. ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕ್ಷೀಣಿಸಿ, ಆಟಿಸಂನಂಥ ರೋಗದೊಂದಿಗೆ ಜನಿಸುವ ಸಾಧ್ಯತೆ ಹೆಚ್ಚು. ಶ್ರವಣ ಹಾಗೂ ದೃಷ್ಟಿ ದೋಷ, ಕೀಲುಗಳಲ್ಲಿ ಚಲನೆ ಇಲ್ಲದಿರುವುದು, ನರ ಬೆಳವಣಿಗೆಯಲ್ಲಿ ವೈಪರೀತ್ಯ ಸೇರಿದಂತೆ ಹಲವು ರೀತಿಯ ರೋಗಗಳಿಗೂ ಇದು ಕಾರಣವಾಗಬಹುದು. ಗರ್ಭಿಣಿಯಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇದ್ದರಂತೂ ಶಿಶುವಿನ ಪ್ರಾಣಕ್ಕೂ ಕುತ್ತು ಬರಬಹುದು ಎಂದು ಈ ಹಿಂದೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಹಿರಿಯ ಸಲಹೆಗಾರ್ತಿ ಡಾ.ಅನು ಶ್ರೀಧರ್ ಈಟಿವಿ ಭಾರತ್ಗೆ ತಿಳಿಸಿದ್ದರು.
ಪ್ರಸ್ತುತ ಝಿಕಾ ವೈರಸ್ಗೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಝಿಕಾ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಈಗ ಚಳಿಗಾಲವಾದ್ದರಿಂದ ಸೊಳ್ಳೆ ಉತ್ಪತ್ತಿಯೂ ಹೆಚ್ಚು. ಹೀಗಾಗಿ, ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆ ನಿವಾರಕ ಕ್ರೀಮ್ಗಳ ಬಳಕೆ, ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದು.