ನ್ಯೂಸ್ ನಾಟೌಟ್:ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಮತ್ತು ಗರ್ಭಗುಡಿಯ ಪೋಟೋ ತೆಗೆಯಲು ನಿಷೇಧ ಎಂಬ ನಿಯಮವಿದ್ದರೂ ಫೋಟೋ ತೆಗೆದಿದ್ದಾರೆಂಬ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ಈ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಕುಲ್ಕುಂದದ ವ್ಯಕ್ತಿಯೊಬ್ಬರು ಗರ್ಭ ಗುಡಿಯ ಪೋಟೋ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ.ಮಾತ್ರವಲ್ಲ ಈ ಫೋಟೋವನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿಯೂ ಹಂಚಿಕೊಂಡಿದ್ದಾರೆಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇವಿಷ್ಟು ಮಾತ್ರವಲ್ಲದೇ ದೇವಸ್ಥಾನದ ಅರ್ಚಕರು,ಪುರೋಹಿತರನ್ನು ಕೂಡ ಅವಾಚ್ಯ ಶಬ್ದ ಬಳಸಿ ನಿಂದನಾತ್ಮಕವಾಗಿ ಬರೆದು ತೇಜೋವಧೆ ಮಾಡುವ ಬರಹಗಳನ್ನು ಬರೆದಿದ್ದಾರೆನ್ನುವ ದೂರು ನೀಡಿದ್ದಾರೆ.
“ತುಪ್ಪ ಕಳವಾಗುತ್ತಿರುವ ಬಗ್ಗೆ ಮೂರು ಬಾರಿ ದೂರು ಕೊಟ್ಟರೂ ಕಮಿಷನ್ ಆಸೆಗೆ ಠಾಣೆಗೆ ಕಾರ್ಯನಿರ್ವಹಣಾಧಿಕಾರಿ ದೂರು ನೀಡಿಲ್ಲ ,ಕದ್ದ ತುಪ್ಪದಲ್ಲಿ ಅವರಿಗೂ ಪಾಲು ಇರಬಹುದು” ಎಂಬ ಬರಹಗಳು ಹರಿದಾಡುತ್ತಿದೆ.ಈ ಬಗ್ಗೆ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪ್ರತಿಕ್ರೀಯಿಸಿದ್ದು, ವಾಟ್ಸಪ್ ನಲ್ಲಿ ಹರಿದಾಡಿದ ವಿಚಾರ ನನ್ನ ಗಮನಕ್ಕೂ ಬಂದಿದೆ, ನಮ್ಮ ಆಡಳಿತ ಸಮಿತಿಯಿಂದಲೂ ದೂರು ನೀಡಲಾಗಿದೆ ಎಂದಿದ್ದಾರೆ.