ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ದಿನ ಗಣನೆ ಆರಂಭಗೊಂಡಿದೆ. ದಿನ ಸಮೀಪಿಸುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಜನಪ್ರಿಯ ಕ್ರೀಡೆ ಕಬಡ್ಡಿಯ ಹವಾ ಹೆಚ್ಚಾಗಿದೆ.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಪ್ರೊ ಕಬಡ್ಡಿ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಗುರುಪ್ರಸಾದ್ ಶಾಮಿಯಾನ ಮಾಲಕ ಜಿ.ಜಿ.ನಾಯಕ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಬಡ್ಡಿ ಪಂದ್ಯಾಟದ ಸಂಚಾಲಕ ಸಂಶುದ್ದೀನ್ ಮಾತಾನಾಡಿ “ಭಾಗವಹಿಸುವ ತಂಡಗಳು, ಕಬಡ್ಡಿ ಪಂದ್ಯಾಟದ ಮಾದರಿಯ ಚಿತ್ರಣ ಈ ರೀತಿ ಇರಲಿದೆ. ಅಂತಿಮ ಕ್ಷಣದ ಕೆಲವೊಂದು ಬದಲಾವಣೆ ಹೊರತು ಪಡಿಸಿ ಬಹುತೇಕ ಚಿತ್ರಣ ಸ್ಪಷ್ಟವಾಗಿದೆ. ರಾಷ್ಟ್ರೀಯ ಮಟ್ಟದ 12 ಪುರುಷ ತಂಡಗಳು, ನಾಲ್ಕು ಮಹಿಳಾ ತಂಡಗಳು ಭಾಗವಹಿಸಲಿದೆ.
ಪುರುಷರ ವಿಭಾಗದಲ್ಲಿ 12 ತಂಡಗಳು ಭಾಗವಹಿಸಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.ಲೀಗ್ ಹಂತದಲ್ಲಿ 3 ತಂಡಗಳಿರುವ 4 ಗುಂಪುಗಳನ್ನು ರಚಿಸಲಾಗುವುದು. ಗುಂಪಿನ 3 ತಂಡಗಳು ಪರಸ್ಪರ ಸೆಣಸಲಿದೆ. ಪ್ರತಿ ಗುಂಪಿನಿಂದ ಅತೀ ಹೆಚ್ಚು ಅಂಕ ಪಡೆದ ತಲಾ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಒಟ್ಟು ಎಂಟು ತಂಡಗಳ ಮಧ್ಯೆ ನಾಕ್ ಔಟ್ ಮಾದರಿಯಲ್ಲಿ ಕ್ವಾರ್ಟರ್ ಫೈನಲ್ ನಡೆದು ನಾಲ್ಕು ತಂಡ ಸೆಮಿ ಫೈನಲ್ನಲ್ಲಿ ಸೆಣಸಿ ಎರಡು ತಂಡ ಫೈನಲ್ ತಲುಪಲಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಹರಿಯಾಣ,ಮುಂಬೈ,ದೆಹಲಿಯ 4 ತಂಡಗಳು, ತಮಿಳುನಾಡಿನ ಎರಡು ತಂಡಗಳು ಸೇರಿ 12 ಪುರುಷರ ತಂಡಗಳು ಭಾಗವಹಿಸಲಿದೆ. ಪಂದ್ಯಾಟದ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಮಹಿಳಾ ವಿಭಾಗದಲ್ಲಿ 4 ತಂಡಗಳು ಭಾಗವಹಿಸಲಿದೆ. ಲೀಗ್ ಮಾದರಿಯಲ್ಲಿ ಪಂದ್ಯ ನಡೆದು ಅತೀ ಹೆಚ್ಚು ಅಂಕ ಪಡೆದ ಎರಡು ತಂಡಗಳು ಪೈನಲ್ ಪ್ರವೇಶ ಪಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ ತಂಡಗಳು ಭಾಗವಹಿಸಲಿದೆ.ಪ್ರಥಮ ಬಹುಮಾನ ರೂ.50 ಸಾವಿರ ಮತ್ತು ಟ್ರೋಫಿ, ದ್ವಿತೀಯ 30,000 ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ ತಲಾ 20,000 ಮತ್ತು ಟ್ರೋಫಿ ನೀಡಲಾಗುವುದು.
ಪಂದ್ಯಾಟವು ಸಂಪೂರ್ಣ ಪ್ರೊ ಕಬಡ್ಡಿ ಮಾದರಿಯಲ್ಲಿ ಲೀಗ್ ಪಂದ್ಯಾಟ ನಡೆಯಲಿದ್ದು,ಪ್ರೊ ಕಬಡ್ಡಿಯಲ್ಲಿನ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ನಿಯಮಗಳನ್ನು ಅಳವಡಿಸಲಾಗುವುದು. ಪ್ರೊ ಕಬಡ್ಡಿ ತಂಡದ ಆಟಗಾರರು, ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು .
ಸುದ್ದಿ ಗೋಷ್ಠಿಯಲ್ಲಿ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಸಂಘದ ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ,ಗೌರವ ಅಧ್ಯಕ್ಷ ಎಸ್.ಪಿ. ಲೋಕನಾಥ್ , ಗೌರವ ಸಲಹೆಗಾರ ಗುರುಪ್ರಸಾದ್, ಶಾಮಿಯಾನ ಮಾಲಕ ಜಿ.ಜಿ ನಾಯಕ್, ಗೋಕುಲ್ ದಾಸ್ ಸುಳ್ಯ, ರಾಜೇಶ್ ಸುಬ್ರಮಣ್ಯ, ಜಿ.ಎ ಮೊಹಮ್ಮದ್, ಸುನಿಲ್, ಗುರು ದತ್ತ್ ನಾಯಕ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
17,18,19 ರಂದು ನಡೆಯುವ ರಾಷ್ಟ್ರೀಯ ಮಟ್ಟದ ಪ್ರೊ ಕಬಡ್ಡಿ ಮಾದರಿಯ ಅದ್ದೂರಿ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ 4 ಸಾವಿರ ಜನರಿಗೆ ಗ್ಯಾಲರಿ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.ಸುಸಜ್ಜಿತವಾದ ಗ್ಯಾಲರಿಗೆ ಈಗಾಗಲೇ ಭರದ ಸಿದ್ಧತೆಗಳು ನಡಿತಿವೆ.ಕಬಡ್ಡಿ ಆಟಗಾರರಿಗೆ ವಸತಿ ಮತ್ತು ಆಹಾರ ವ್ಯವಸ್ಥೆ ಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದ್ದು, ವೀಕ್ಷಕರಿಗೂ ಫುಡ್ ಸ್ಟಾಲ್ ಲಭ್ಯವಿದೆ.ಇನ್ನು ಅತಿಥಿಗಳಿಗೆ , ಕಾರ್ಯಕ್ರಮ ಆಯೋಜಕರಿಗೆ ಹಾಗೂ ಶಾಮಿಯಾನ ಮಾಲಕರು , ಕೆಲಸಗಾರರಿಗೆ ವಿ ಐ ಪಿ ಪಾಸ್ ಲಭ್ಯವಿದೆ.ಕಾರ್ಯಕ್ರಮದಲ್ಲಿ ವಿವಿಧ ಅತಿಥಿಗಳು ಭಾಗಿಯಾಗಲಿದ್ದು,ಕಾರ್ಯಕ್ರಮವನ್ನು ಚಂದಗಾಣಿಸಲಿದ್ದಾರೆ.