ನ್ಯೂಸ್ ನಾಟೌಟ್ : ಇಂದು ನಡೆಯುತ್ತಿರುವ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಕೇವಲ ಸೆಮಿಫೈನಲ್ ಪಂದ್ಯವಾಗಿ ಮಾತ್ರ ಉಳಿದಿಲ್ಲ. ಇದು ಸೇಡಿನ ಸಮರವಾಗಿ ಬದಲಾಗಿದೆ. ರಣಾಂಗಣದಲ್ಲಿ ಬ್ಯಾಟ್ & ಬೌಲ್ ಅನ್ನೋ ವೆಪನ್ ಹಿಡಿದು ಯುದ್ಧ ಗೆಲ್ಲುವ ಉತ್ಸಾಹ ಟೀಮ್ ಇಂಡಿಯಾದ್ದಾಗಿದೆ.ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವಾಂಖೆಡೆ ಸ್ಟೇಡಿಯಮ್ನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು,ರೋಚಕ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.ಈ ಮಧ್ಯೆ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿರಾಟರೂಪ ತೋರುತ್ತಿದ್ದು, ಕ್ರಿಕೆಟ್ ದೇವರ 20 ವರ್ಷಗಳ ಹಿಂದಿನ ದಾಖಲೆಯನ್ನೇ ಮುರಿದಿದ್ದಾರೆ.
ವಿರಾಟ್ ಕೊಹ್ಲಿ ಅವರು ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸುವ ಮೂಲಕ ಅವರು ಈ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2003ರ ಏಕದಿನ ವಿಶ್ವಕಪ್ನಲ್ಲಿ 673 ರನ್ ಗಳಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ 674 ರನ್ಗಳನ್ನು ಗಳಿಸಿ ಇನ್ನೂ ಅಜೇಯರಾಗಿ ಆಟ ಮುಂದುವರಿಸಿರುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.ಇದರ ಮಧ್ಯೆ ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ಇನ್ನಿಂಗ್ಸ್ನಲ್ಲಿ ಒಟ್ಟು 8 ಸಲ ಅರ್ಧ ಶತಕ ಬಾರಿಸುವ ಮೂಲಕ ಈ ದಾಖಲೆ ಮಾಡಿರುವ ಪ್ರಥಮ ಆಟಗಾರ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.ಸದ್ಯ 92 ರನ್ ಮಾಡಿರುವ ವಿರಾಟ್ ಕೊಹ್ಲಿ, ಸಚಿನ್ ಅವರ ಇನ್ನೊಂದು ದಾಖಲೆಯನ್ನೂ ಮುರಿಯುವುದು ನಿಚ್ಚಳವಾಗಿದೆ.