ನ್ಯೂಸ್ ನಾಟೌಟ್ : ಅಜ್ಜನ ಸಾವಿನ ಸುದ್ದಿ ಕೇಳಿ ಆಘಾತಗೊಂಡು ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಅಪಘಾತದಲ್ಲಿ (Road Accident)ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಉಡುಪಿ ಜಿಲ್ಲೆ ಹೆಬ್ರಿ ಮೂಲದ ನಿತೀಶ್ ಪೂಜಾರಿ ಮೃತ ದುರ್ದೈವಿ ಎನ್ನಲಾಗಿದೆ. ಚಾಮರಾಜನಗರದಲ್ಲಿ ನಿತೀಶ್ ಪೂಜಾರಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದ.ನಿನ್ನೆ ಭಾನುವಾರ ವಯೋಸಹಜ ಕಾಯಿಲೆಯಿದ್ದ ಅಜ್ಜ ಮೃತಪಟ್ಟಿದ್ದಾಗಿ ಕುಟುಂಬಸ್ಥರು ವಿಷಯ ಮುಟ್ಟಿಸಿದ್ದರು.ಈ ವೇಳೆ ಆಘಾತಗೊಂಡು ಮೊಮ್ಮಗ ಹೊರಟಿದ್ದಾನೆ.ಭಾರವಾದ ನೋವಿನಲ್ಲಿ ಬಸ್ ಬದಲಿಗೆ ಭಾನುವಾರ ತಡರಾತ್ರಿ ಬೈಕ್ ಮೂಲಕ ಊರಿಗೆ ಹೊರಟಿದ್ದ ಮೊಮ್ಮಗ ಅವಸರದಲ್ಲಿದ್ದ ಎನ್ನಲಾಗಿದೆ.ಈ ವೇಳೆ ಆತನಿಗೆ ರಸ್ತೆಯಲ್ಲಿದ್ದ ಹಂಪ್ಸ್ ಕಾಣದೆ ನಿಯಂತ್ರಣ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಬೈಕ್ ವೇಗವಾಗಿ ಇದ್ದ ಕಾರಣಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ, ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮನೆಯ ಹಿರಿಯ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿದ್ದ ಆ ಕುಟುಂಬಕ್ಕೆ, ಇದೀಗ ಮನೆ ಮಗನೂ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.