ನ್ಯೂಸ್ ನಾಟೌಟ್ : ತೆಲಂಗಾಣದಲ್ಲಿನ ಪತ್ರಿಕೆಗಳಲ್ಲಿ ಗ್ಯಾರಂಟಿ ಕುರಿತು ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಚುನಾವಣಾ ಆಯೋಗ ಸೋಮವಾರ (ನ.೨೭) ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ನೋಟಿಸ್ ನೀಡಿದೆ.
ನವೆಂಬರ್ 30 ರಂದು ತೆಲಂಗಾಣ ಚುನಾವಣೆ ನಡೆಯಲಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ತೆಲಂಗಾಣದ ಮಾಧ್ಯಮಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾಹೀರಾತು ಪ್ರಕಟಿಸುವ ಮೂಲಕ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಆಯೋಗಕ್ಕೆ ಮೊನ್ನೆ ದೂರು ಸಲ್ಲಿಸಿತ್ತು.
ಬಿಆರ್ಎಸ್ ಕೂಡ ಈ ವಿಚಾರವಾಗಿ ಚುನಾವಣಾ ಸಮಿತಿಯನ್ನು ಸಂಪರ್ಕಿಸಿದೆ. ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಪೂರ್ವಾನುಮತಿ ಪಡೆಯದ ಕಾರಣದಿಂದ ವಿವರಣೆಯನ್ನು ಕೇಳಿದೆ ಎಂದು ವರದಿ ತಿಳಿಸಿದೆ.
ಈ ಸಂಬಂಧ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಆಯೋಗ ಪತ್ರ ಬರೆದಿದ್ದು, ಜಾಹಿರಾತು ಪ್ರಕಟಿಸಲು ರಾಜ್ಯ ಸರ್ಕಾರ ಪೂರ್ವಾನುಮತಿ ಪಡೆದಿಲ್ಲ, ಇದು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಆಯೋಗದಿಂದ ರಾಜ್ಯ ಸರ್ಕಾರ ಅಗತ್ಯ ಅನುಮೋದನೆ ತೆಗೆದುಕೊಳ್ಳುವವರೆಗೆ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರವ ಅಂತಹ ಯಾವುದೇ ಜಾಹೀರಾತು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ.
ಮಾದರಿ ನೀತಿ ಸಂಹಿತೆ ಸೂಚನೆಗಳ ಉಲ್ಲಂಘನೆಗೆ ಕಾರಣವಾದ ಸಂದರ್ಭಗಳ ಕುರಿತು ಮಂಗಳವಾರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ಕೇಳಿದೆ. ಎಂಸಿಸಿ ಸೂಚನೆಗಳ ಪ್ರಕಾರ ಕಾರ್ಯವಿಧಾನದ ಉಲ್ಲಂಘನೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಆಯೋಗ ಪ್ರಶ್ನೆ ಮಾಡಿದೆ ಎನ್ನಲಾಗಿದೆ.
ನವೆಂಬರ್ 30 ರಂದು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209