ನ್ಯೂಸ್ ನಾಟೌಟ್ :ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವತಿಯಿಂದ ‘ವಿಶ್ವ ಪ್ರಸವಪೂರ್ವ ದಿನ ಕಾರ್ಯಕ್ರಮ’ ನ.17 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ.ಕೆ. ವಿ ಚಿದಾನಂದ ಅವರು ನೆರವೇರಿಸಿದರು.ಬಳಿಕ ಮಾತನಾಡಿದ ಅವರು ‘ಮಗು ಜನಿಸಿದ ನಂತರ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಗರ್ಭಿಣಿಯಾಗುವ ಮೊದಲು ಹಾಗೂ ಗರ್ಭಿಣಿಯಾದ ಬಳಿಕ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳೇನು?ಇವುಗಳ ಬಗ್ಗೆ ತಿಳಿದುಕೊಂಡಿರುವ ಅಗತ್ಯವಿದೆ.ಮಾತ್ರವಲ್ಲ ರೋಗ ಲಕ್ಷಣಗಳ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಉಪಾಧ್ಯಕ್ಷೆ ಶೋಭಾ ಚಿದಾನಂದ,ಡೀನ್ ನೀಲಾಂಬಿಕೆ ನಟರಾಜನ್ ವಿಶ್ವ ಪ್ರಸವಪೂರ್ವ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಸ್ತ್ರೀರೋಗ ತಜ್ಞೆ ಗೀತಾ ದೊಪ್ಪ ಮಾತನಾಡಿ, ಗರ್ಭಿಣಿಯರು ಶಿಶುವಿಗೆ ಜನ್ಮ ನೀಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಆಗುವ ತೊಂದರೆಗಳು,ಆಹಾರ ಪದಾರ್ಥಗಳು ,ಶಿಶುವಿನ ಬೆಳವಣಿಗೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಕೆ.ವಿ.ಜಿ ವ್ಯಾಕ್ಸಿನೇಷನ್ ಡಿಪಾರ್ಟ್ ಮೆಂಟ್ ಮುಖ್ಯಸ್ಥ ಡಾ.ನಾರಾಯಣ ಹೊಳ್ಳ ಮಾತನಾಡಿ ಶಿಶು ಹುಟ್ಟಿದ ನಂತರ ಯಾವ ರೀತಿಯಲ್ಲಿ ಪೋಷಣೆ ನೀಡಬೇಕು ,ಆರೈಕೆ, ಪೋಲಿಯೋ ನೀಡುವ ವಿಧಾನಗಳ ಬಗ್ಗೆ ತಿಳಿಸಿದರು.ಬಳಿಕ ಮಕ್ಕಳ ವಿಭಾಗದ ವಿದ್ಯಾರ್ಥಿಗಳು ಶಿಶುವಿನ ಬೆಳವಣಿಗೆಯ ಬಗ್ಗೆ ಕಿರುನಾಟಕ ಪ್ರದರ್ಶಿಸಿದರು.ಸ್ತ್ರೀ ರೋಗ ತಜ್ಞೆ ವೀಣಾ,ಮಕ್ಕಳ ವಿಭಾಗದ ಪ್ರೊ. ಸುಧಾ ರುದ್ರಪ್ಪ,ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.