ನ್ಯೂಸ್ ನಾಟೌಟ್: ಪಿಝಾದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರದಲ್ಲಿ ನೂರಾರು ಬಗೆಗಳು ಲಭ್ಯ. ಹಾವಿನ ಮಾಂಸದ ಪಿಝಾ (Snake Pizza) ವನ್ನೂ ತಿನ್ನುತ್ತಾರಂತೆ ಎಂಬ ಸುದ್ದಿ ಜೋರಾಗಿದೆ.
ಹಾಂಗ್ಕಾಂಗ್ನಲ್ಲಿರುವ ಸ್ನೇಕ್ ರೆಸ್ಟೋರೆಂಟ್ – ಸೆರ್ ವಾಂಗ್ ಫನ್ ಪಿಝಾ ಹಟ್ ಜೊತೆ ಒಗ್ಗೂಡಿ ಇದೀಗ ಹೊಸ ನಮೂನೆಯ ಪಿಝಾ ತಯಾರಿಸುತ್ತಿದೆ. ಪಿಝಾದೊಳಗಿನ ಅನಾನಸ್ ತಿನ್ನುವುದು ಹೇಗೆ ಎಂದು ಜನ ಇನ್ನೂ ಒದ್ದಾಡುತ್ತಿರುವಾಗ ಇದೀಗ ಇಂಥ ಪಿಝಾ ಪರಿಚಯಿಸಿದೆ ಪಿಝಾ ಹಟ್ ಎಂದು ವರದಿ ತಿಳಿಸಿದೆ.
1895 ರಲ್ಲಿ ಸ್ಥಾಪನೆಗೊಂಡ ಸೆಂಟ್ರಲ್ ಹಾಂಗ್ ಕಾಂಗ್ನಲ್ಲಿರುವ ಸ್ನೇಕ್ ರೆಸ್ಟೋರೆಂಟ್ ‘ಸೆರ್ ವಾಂಗ್ ಫನ್’ ಜೊತೆಗೆ ಪಿಝಾ ಹಟ್ ಸ್ನೇಕ್ ಪಿಝಾ ತಯಾರಿಸಲಾರಂಭಿಸಿದೆ. ಪಿಝಾದ ಮೇಲೋಗರಕ್ಕೆ ಹಾವಿನ ಮಾಂಸದ ತುಂಡು, ಕಪ್ಪು ಅಣಬೆ ಮತ್ತು ಚೀನಾದ ಒಣಗಿದ ಹ್ಯಾಮ್ ಅನ್ನು ಅಲಂಕರಿಸಿ ಕೊಡುತ್ತಿದೆ. ಒಂಬತ್ತು ಇಂಚಿನ ಪಿಝಾ ಟೊಮ್ಯಾಟೋ ಬೇಸ್ ಬದಲಾಗಿ ಆ್ಯಬಲೋನ್ ಸಾಸ್ ಬೇಸ್ನೊಂದಿಗೆ ಇರುತ್ತದೆ. ಈ ಪಿಝಾ ಸವಿಯುವ ಅವಧಿ ನವೆಂಬರ್ 22 ರವರೆಗೆ ಮಾತ್ರ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ.
ಪಿಝಾ ಹಟ್, ‘ಚೀಸ್ ಮತ್ತು ಒಣ ಚಿಕನ್ ತುಂಡುಗಳೊಂದಿಗೆ ಸೇರಿಸಿದ ಸ್ನೇಕ್ ಮೀಟ್ ರುಚಿಯನ್ನು ಕೊಡುತ್ತದೆ ಅಷ್ಟೇ ಅಲ್ಲ ಇದು ಆರೋಗ್ಯಕ್ಕೂ ಪೂರಕವಾಗಿದೆ’ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ.
ಕೆಲ ನೆಟ್ಟಿಗರು ಇದನ್ನು ನೋಡಿ, ಆರೋಗ್ಯಕ್ಕೆ ಇದು ಹೇಗೆ ಪೂರಕ ಎನ್ನುವುದನ್ನು ವಿವರಿಸಿ ಎಂದು ಕೇಳಿಕೊಂಡಿದ್ದಾರೆ. ಚೀನಾ ಮಂದಿಗೆ ಇದು ಇಷ್ಟವಾಗಬಹುದು, ಉಳಿದಂತೆ ಇದು ಅಸಹ್ಯ ತರಿಸುವಂತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.