ನ್ಯೂಸ್ ನಾಟೌಟ್ : ಮಳೆ ಹುಡುಗಿ ಪೂಜಾ ಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆಯದಿದ್ದರೂ ಅವರ ಕನ್ನಡ ಪ್ರೀತಿ , ಅಭಿಮಾನ ಹಾಗೂ ಕನ್ನಡವನ್ನು ಮಾತನಾಡುವ ಮೂಲಕ,ಕನ್ನಡ ಹಾಡುಗಳನ್ನು ಹಾಡುವ ಮೂಲಕ ಹಾಗೂ ಇತ್ತೀಚೆಗೆ ಅವರು ಬರೆದ ಕನ್ನಡ ಅಕ್ಷರಗಳೂ ಕೂಡ ಕನ್ನಡಿಗರ ಹೃದಯವನ್ನೇ ಗೆದ್ದುಬಿಟ್ಟಿತ್ತು.
ಇದೀಗ ವೈವಾಹಿಕ ಜೀವನಕ್ಕೆ ನಟಿ ಪೂಜಾ ಗಾಂಧಿ ಅವರು ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಶೇಷ ಆಹ್ವಾನ ಪತ್ರಿಕೆ ಹಾಗೂ ಇವರ ಸರಳ ವಿವಾಹಕ್ಕೆ ಎಲ್ಲರೂ ಶುಭ ಹಾರೈಕೆ ಮಾಡುತ್ತಿದ್ದಾರೆ.
ನಾಳೆ (ನವೆಂಬರ್ 29ರಂದು) ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ಪೂಜಾ ಗಾಂಧಿ ಮತ್ತು ವಿಜಯ್ ಮದುವೆ ನಡೆಯಲಿದೆ. ಕೇವಲ ಆತ್ಮೀಯ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸರಳ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದು,ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ.ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿ ಹೊಂದಿರುವ ವಿಜಯ್ ಮತ್ತು ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದೇ ವಿಜಯ್ ಎಂದು ಮೂಲಗಳಿಂದ ತಿಳಿದು ಬಂದಿದೆ.
2012ರಲ್ಲಿ ಉದ್ಯಮಿ ಆನಂದ್ ಗೌಡ ಜೊತೆ ಪೂಜಾ ಗಾಂಧಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಕೂಡ ಆಗಬೇಕಿತ್ತು ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದು ಬಿದ್ದಿತ್ತು.ಕೆಲವು ವರ್ಷ ಪೂಜಾ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆನಂತರ ರಾಜಕೀಯ ಮತ್ತು ಸಿನಿಮಾ ಎಂದು ರೀ-ಎಂಟ್ರಿ ಕೊಟ್ಟು ಈಗ ಕನ್ನಡದಲ್ಲಿ ಪರ್ಫೆಕ್ಟ್ ಟೀಚರ್ ಆಗಿದ್ದಾರೆ.