ನ್ಯೂಸ್ ನಾಟೌಟ್: ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಆದರೂ ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಅಪಪ್ರಚಾರ ಮಾಡಿದರೂ ಇವರ ಕುತಂತ್ರ ಬುದ್ಧಿಯನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ರಮಾನಾಥ ರೈ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಎಲ್ಲ ನಿಗಮದ ಸಾಲವನ್ನು ಮನ್ನಾ ಮಾಡಿತ್ತು. ಕಾಂಗ್ರೆಸ್ ಬಡವರಿಗೆ ಬೇಕಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ ಬಿಜೆಪಿ ನಾಯಕರು ಸರ್ಕಾರ ಪತನವಾಗಲು ಕಾಯುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಅಧಿಕಾರವಿಲ್ಲದೆ ನೀರಿನಿಂದ ಹೊರಕ್ಕೆ ಬಿದ್ದ ಮೀನಿನಂತಾಗಿದ್ದಾರೆ.
ಗೃಹ ಜ್ಯೋತಿ, ಶಕ್ತಿ ಯೋಜನೆ ಯಶಸ್ವಿಯಾಗಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮೀ ಕೆಲವೊಂದು ಸಮಸ್ಯೆಯಾಗಿರಬಹುದು. ರೈತರ ಸಾಲ ಮನ್ನಾ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಬಡವರಿಗೆ ಬೇಕಾದ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದರು.
ಜಿಲ್ಲೆಯ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಇವರಿಗೆ ಇಚ್ಛಾಶಕ್ತಿ ಕೊರತೆಯಿಂದ ಈ ರೀತಿಯಾಗಿದೆ. ಸರ್ಕಾರದ ಕಾಮಗಾರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಮಂಜೂರಾತಿಯಿಲ್ಲದೆ ಅಡ್ವಾನ್ಸ್ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗುತ್ತಿದೆ. ಈ ಬಗ್ಗೆ ತನಿಖೆ ಮುಗಿದ ಬಳಿಕ ಎಲ್ಲಾ ಅನುದಾನ ಬರಲಿದೆ ಎಂದು ರಮಾನಾಥ ರೈ ತಿಳಿಸಿದರು.
ಜಿಲ್ಲೆಯಲ್ಲಿನ ಮರಳು ಸಮಸ್ಯೆ ಪ್ರಸ್ತಾಪಿಸಿ, ಸಿಆರ್ ಝೆಡ್ ಗೆ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ. ಅದು ಸಮಸ್ಯೆಯಾಗಿದೆ. ನಾನ್ ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮಾಡಬೇಕು. ಶಾಸಕರ ಕುಮ್ಮಕ್ಕಿನಿಂದ ಈ ಹಿಂದೆ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಆದರೆ ಈಗ ಅದನ್ನು ತಡೆದಿದ್ದೇವೆ. ನಾಲ್ಕು ವರ್ಷದ ಹಿಂದಿನಿಂದ ಪರವಾನಗಿ ಪಡೆದವರು ವೇವ್ ಬ್ರಿಜ್ ಮಾಡಿಲ್ಲ. ನಾಲ್ಕು ವರ್ಷ ಮಾಡಿಲ್ಲ ಯಾಕೆ ಎಂದು ರಮಾನಾಥ ರೈ ಪ್ರಶ್ನಿಸಿದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಕಾಂಗ್ರೆಸ್ ಮುಖಂಡ ರಕ್ಷಿತ್ ಸುವರ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.