ನ್ಯೂಸ್ ನಾಟೌಟ್ : ಪ್ರಯಾಣದ ವೇಳೆ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನ ಜನರಲ್ ಕೋಚ್ನಲ್ಲಿ ವ್ಯಕ್ತಿಯೊಬ್ಬರು ಅಚಾನಕ್ ಆಗಿ ಕೊನೆಯುಸಿರೆಳೆದಿದ್ದಾರೆ. ಉಳಿದ ಪ್ರಯಾಣಿಕರು ಅನಿವಾರ್ಯವಾಗಿ ಶವದ ಜತೆ ಸುಮಾರು 600 ಕಿಮೀ ಪ್ರಯಾಣಿಸ ಬೇಕಾಯ್ತು ಎಂದು ವರದಿ ತಿಳಿಸಿದೆ.
ರೈಲು ಚೆನ್ನೈನಿಂದ ಹಜರತ್ ನಿಜಾಮುದ್ದೀನ್ಗೆ ತೆರಳುತ್ತಿತ್ತು. ಪ್ರಯಾಣಿಕರು ರೈಲ್ವೇ ಅಧಿಕಾರಿಗಳಿಗೆ ಹಲವು ಬಾರಿ ಮುನ್ಸೂಚನೆ ನೀಡಿದರೂ, ಅವರು ಉತ್ತರ ಪ್ರದೇಶದ ಝಾನ್ಸಿ ತಲುಪುವವರೆಗೂ ಶವವನ್ನು ತೆಗೆಯಲಿಲ್ಲ, ಅಲ್ಲಿ ಅದನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಎನ್ನಲಾಗಿದೆ.
ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಂದಾ ಜಿಲ್ಲೆಯ 36 ವರ್ಷದ ರಾಮ್ಜೀತ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಆತನ ಸೋದರ ಮಾವ ಗೋವರ್ಧನರೊಂದಿಗೆ ಮರಳಿ ತನ್ನ ಊರು ‘ಬಂದಾ’ಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ಭಾನುವಾರ, ರೈಲು ನಾಗ್ಪುರ ತಲುಪಿದಾಗ ರಾಮ್ಜೀತ್ ಆರೋಗ್ಯವು ಹದಗೆಟ್ಟಿತು ಮತ್ತು ರೈಲಿನಲ್ಲೇ ಅಸುನೀಗಿದ್ದಾರೆ ಎಂದು ಗೋವರ್ಧನ್ ಹೇಳಿದ್ದರು ಎನ್ನಲಾಗಿದೆ.
ನಂತರ ಪ್ರಯಾಣಿಕರು ರಾಮ್ಜೀತ್ ದೇಹದ ಜೊತೆಗೆ ತಮ್ಮ ಪ್ರಯಾಣವನ್ನು ಮುಂದುವರೆಸಲು ಒತ್ತಾಯಿಸಲಾಯಿತು ಎಂದು ದೂರಲಾಗಿದೆ.
ಬೆಳಗ್ಗೆ ರೈಲು ಭೋಪಾಲ್ ತಲುಪಿದಾಗ ಪ್ರಯಾಣಿಕರು ಮತ್ತೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಝಾನ್ಸಿ ತಲುಪಿದಾಗ ಶವವನ್ನು ರೈಲಿನಿಂದ ಹೊರತೆಗೆಯಲಾಯಿತು ಎಂದು ವರದಿ ತಿಳಿಸಿದೆ.