ನ್ಯೂಸ್ ನಾಟೌಟ್ : ಪುಣೆ ರೈಲ್ವೆ ನಿಲ್ದಾಣಕ್ಕೆ ತಲುಪುವುದಕ್ಕೂ ಮುನ್ನ ಭಾರತ್ ಗೌರವ್ ವಿಶೇಷ ರೈಲಿನಲ್ಲಿ ಚೆನ್ನೈನಿಂದ ಪ್ರಯಾಣಿಸುತ್ತಿದ್ದ ಸುಮಾರು 80 ಪ್ರಯಾಣಿಕರು ಹೊಟ್ಟೆ ನೋವು ಹಾಗೂ ಇನ್ನಿತರ ಸಮಸ್ಯೆಗಳಿಗೆ ಈಡಾದ ಮಂಗಳವಾರ (ನ.28) ತಡರಾತ್ರಿ ನಡೆದಿದೆ. ಬಹುಶಃ ವಿಷಪೂರಿತ ಆಹಾರ ಸೇವನೆಯಿಂದ ಹಾಗಾಗಿರಬಹುದು ಎಂದು ಶಂಕಿಸಲಾಗಿದೆ, ಆದರೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
ವಿಷಪೂರಿತ ಆಹಾರ ಸೇವನೆಯ ಕುರಿತು ಪುಣೆ ರೈಲ್ವೆ ನಿಲ್ದಾಣದ ಅಧಿಕಾರಿಗಳು ರಾತ್ರಿ ಸುಮಾರು 10.45ಕ್ಕೆ ಮಾಹಿತಿ ಸ್ವೀಕರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪುಣೆ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮದಾಸ್ ಭಿಸೆ, “ಆ ರೈಲು ಸುಮಾರು 1,000 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಹಲವಾರು ಪ್ರಯಾಣಿಕರು ತಲೆ ಸುತ್ತು, ಹೊಟ್ಟೆ ನೋವು, ವಾಂತಿ ಹಾಗೂ ಭೇದಿಯಂಥ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಗಿತ್ತು.
ಇದಕ್ಕೆ ಪ್ರತಿಯಾಗಿ, ರೂಬಿ ಹಾಲ್ ವೈದ್ಯರೊಂದಿಗೆ ರೈಲ್ವೆ ಆಸ್ಪತ್ರೆಯ ವೈದ್ಯರ ತಂಡ ಹಾಗೂ ರೈಲ್ವೆ ಅಧಿಕಾರಿಗಳನ್ನು ಪ್ರಯಾಣಿಕರಿಗೆ ವೈದ್ಯಕೀಯ ನೆರವು ಒದಗಿಸಲು ಪುಣೆ ರೈಲ್ವೆ ನಿಲ್ದಾಣಕ್ಕೆ ಕಳಿಸಿ ಕೊಡಲಾಗಿತ್ತು” ಎಂದು ಹೇಳಿದ್ದಾರೆ.
“ರೈಲು ನಿರ್ಗಮಿಸುವುದಕ್ಕೂ ಮುನ್ನ ಅದನ್ನು ಸೂಕ್ತ ರೀತಿಯಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಆ ರೈಲಿನಲ್ಲಿ ಅಡುಗೆ ಕೋಣೆಯ ಸೌಲಭ್ಯವಿರಲಿಲ್ಲ. ಸೋಲಾಪುರದಿಂದ ಅಂದಾಜು 180 ಕಿಮೀ ದೂರದಲ್ಲಿರುವ ವಾಡಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಆಹಾರ ಪಡೆದಿದ್ದಾರೆ ಎಂಬ ವರದಿಗಳಿವೆ ಎನ್ನಲಾಗಿದೆ.
ಪ್ರಯಾಣಿಕರು ದಾನದ ರೂಪದಲ್ಲೂ ಆಹಾರವನ್ನು ಸ್ವೀಕರಿಸಿದ್ದಾರೆ ಎಂದು ಕೆಲವು ಮೂಲಗಳು ಉಲ್ಲೇಖಿಸಿರುವುದರಿಂದ ನಾವು ಆಹಾರದ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ, ಆ ಆಹಾರವನ್ನು ರೈಲ್ವೆ ಇಲಾಖೆಯು ಪೂರೈಸಿರಲಿಲ್ಲ. ಆದರೆ, ಮುಂದಿನ ತನಿಖೆಗಳು ಪ್ರಗತಿಯಲ್ಲಿವೆ” ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/