ನ್ಯೂಸ್ ನಾಟೌಟ್: ತಡರಾತ್ರಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳಿಗೆ ಮದ್ಯ ಕುಡಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಘಟನೆ ಪುತ್ತೂರಿನ ಬಸ್ ನಿಲ್ದಾಣದ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
24.11.2023 ರಂದು ರಾತ್ರಿ ಸಮಯ ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿದ್ದ ಸಂತ್ರಸ್ಥ ಮಹಿಳೆ ಪುತ್ತೂರಿನ ಬಸ್ ನಿಲ್ದಾಣದ ಬಳಿ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಆರ್ಯಾಪು ಗ್ರಾಮದ ನಿವಾಸಿ ಸಂಶುದ್ದೀನ್ ಆಸ್ಗರ್ ಆಲಿ (23) ಎಂಬಾತ ಮಹಿಳೆಯೊಂದಿಗೆ ಮಾತನಾಡಿ ಆಕೆಯ ಜೊತೆಗೆ ಸಲುಗೆ ಬಳಸಿಕೊಂಡು ನಂತರ ಮದ್ಯ ಕುಡಿಸಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ: 25-11-2023 ರಂದು ಅ.ಕ್ರ 114/2023 ಕಲಂ 376 ಐ.ಪಿ.ಸಿ ಸೆಕ್ಷನ್ ಪ್ರಕಾರ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು 28.11.2023 ರಂದು ಸಂಜೆ ಪುತ್ತೂರು KSRTC ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.