ನ್ಯೂಸ್ ನಾಟೌಟ್: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವಿಚಾರವಾಗಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಖುದ್ದು ಸಂಸದ ಪ್ರತಾಪ್ ಸಿಂಹ(Pratap Simha) ಅವರು ಆಗಮಿಸಿದರು. ಕೊಡಗು ಜಿಲ್ಲೆಯ ವಿರಾಜಪೇಟೆ(Virajpete) ಗ್ರಾಮಾಂತರ ಠಾನೆಗೆ ಅವರು ಬಂದಿದ್ದು, ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ರು.ಈ ವೇಳೆ ನಾವು ಖುದ್ದಾಗಿ ಬಂದು ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಮ್ಮತ್ತಿ ಗ್ರಾಮದ ಲೋಶನ್ ಕಾರ್ಯಪ್ಪ ಎಂಬ ಬಿಜೆಪಿ ಕಾರ್ಯಕರ್ತನೋರ್ವ ಇತ್ತೀಚೆಗೆ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ.ಈ ವೇಳೆ ಅದರಲ್ಲಿ ತೆಲಂಗಾಣ ಸರ್ಕಾರಕ್ಕೆ ಕರ್ನಾಟಕದ ದುಡ್ಡು ಹಂಚುತ್ತಿರುವ ಎಟಿಎಂ ಸರ್ಕಾರ ಎಂದು ಟೀಕೆ ಮಾಡಲಾಗಿತ್ತು. ಇದೇ ವಿಷಯ ಎಸ್ಪಿಗೆ ದೂರು ಹೋಗಿತ್ತು. ಅದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದ್ದು, ಅದನ್ನು ಪರಿಗಣಿಸಿದ ಪೊಲೀಸರು ಲೋಶನ್ ಕಾರ್ಯಪ್ಪ ಎಂಬುವವರನ್ನು ಠಾಣೆಗೆ ಕರೆಸಿ ಪೋಸ್ಟ್ ಡೀಲಿಟ್ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ,ಮಾತ್ರವಲ್ಲ ತಪ್ಪೊಪ್ಪಿಗೆ ಬರೆಸಿಕೊಂಡು ಕಳುಹಿಸಿದ್ದರು ಎಂದು ಹೇಳಲಾಗಿದೆ.
ಇದೀಗ ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಬಿಜೆಪಿ ಕಾರ್ಯಕರ್ತ ಕೇವಲ ಒಂದು ಪೋಸ್ಟ್ ಹಂಚಿಕೊಂಡಿದ್ದಕ್ಕೆ ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಜಿಲ್ಲಾ ಬಿಜೆಪಿ ಇದನ್ನು ಖಂಡಿಸಿದೆ.ವಿಚಾರ ಅರಿಯುತ್ತಲೇ ಮಾಜಿ ಶಾಸಕ ಕೆಜಿ ಬೋಪಯ್ಯ ಜೊತೆಗೂ ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವಾಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಆಧಾರದ ಮೇಲೆ ತಾವು ಮುಚ್ಚಳಿಕೆ ಬರೆಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಅಪ ಪ್ರಚಾರ ಮಾಡಿದಾಗ ಯಾಕೆ ನೀವು ಅವರನ್ನು ಕರೆದು ಮುಚ್ಚಳಿಕೆ ಕರೆಸಿಕೊಳ್ಳಲಿಲ್ಲ ಎಂದು ಕೆಂಡಾಮಂಡಲರಾದರು. ಇನ್ನು ಮುಂದೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಪೊಲಿಸ್ ಠಾಣೆಗೆ ನುಗ್ಗುವುದಾಗಿ ಪೊಲಿಸರಿಗೆ ಎಚ್ಚರಿಕೆ ನೀಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ವಿರಾಜಪೇಟೆ ಪೊಲೀಸರು ಲೋಶನ್ ಕಾರ್ಯಪ್ಪನವರ ಪ್ರಕರಣವನ್ನು ಇಲ್ಲಿಗೆ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.