ನ್ಯೂಸ್ ನಾಟೌಟ್: ಇತ್ತೀಚೆಗೆ ಸೈಬರ್ ಕ್ರೈಂ ಮತ್ತು ಹನಿಟ್ರ್ಯಾಪ್ನಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ದೆಹಲಿಯಲ್ಲಿ ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಶಾಹದಾರಾ ಜಿಲ್ಲೆಯ ಸೈಬರ್ ಸೆಲ್ ಠಾಣೆ ಪೊಲೀಸರು ರಾಜಸ್ಥಾನದ ಸೈಬರ್ ತಂಡದ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಾಜಸ್ಥಾನ ನಿವಾಸಿಗಳಾದ ಬರ್ಖತ್ ಖಾನ್ (32) ಮತ್ತು ರಿಜ್ವಾನ್ (22) ಎಂದು ಗುರುತಿಸಲಾಗಿದೆ. ಇವರ ಮನೆಯಿಂದ ಆರು ಮೊಬೈಲ್ ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 18ರಂದು ವೃದ್ಧರೊಬ್ಬರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ವಾಟ್ಸ್ಆ್ಯಪ್ ಗೆ ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕರೆ ಬಂದಿತ್ತು. ಫೋನ್ ರಿಸೀವ್ ಮಾಡಿದಾಗ ಹುಡುಗಿಯೊಬ್ಬಳು ಅಶ್ಲೀಲವಾಗಿ ಕಂಡಳು. ನಾನು ಕೂಡಲೇ ಫೋನ್ ಕಟ್ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಲ್ ರಿಸೀವ್ ಮಾಡಿದ ಕೂಡಲೇ ಆ ಹುಡುಗಿ ಸಂತ್ರಸ್ತ ಮುಖದೊಂದಿಗೆ ಕರೆಯ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದಾಳೆ.” ಎನ್ನಲಾಗಿದೆ.
ಸ್ವಲ್ಪ ಸಮಯದ ನಂತರ ಮತ್ತೆ ಅಪರಿಚಿತ ಸಂಖ್ಯೆಯಿಂದ ಕರೆ ಬರಲಾರಂಭಿಸಿತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆ ಗ್ಯಾಂಗ್ ಸ್ಕ್ರೀನ್ಶಾಟ್ಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ, ಹಣಕ್ಕಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
‘ಮೊದಲು ಹಣಕ್ಕಾಗಿ ಒತ್ತಾಯಿಸಿದಾಗ ನಾನು ಹೆಚ್ಚು ಗಮನ ಹರಿಸಲಿಲ್ಲ. ಬಳಿಕ ಆರೋಪಿಗಳು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಫೋಟೋಗಳನ್ನು ನನ್ನ ವಾಟ್ಸ್ಆ್ಯಪ್ಗೆ ಕಳುಹಿಸಿದರು. ಆ ನಂತರ ಆರೋಪಿಗಳು ಮತ್ತೆ ಬೆದರಿಕೆ ಹಾಕಲು ಶುರು ಮಾಡಿದರು. ಇಂತಹ ಪರಿಸ್ಥಿತಿಯಲ್ಲಿ ನನಗೇನು ಮಾಡಬೇಕು ಎಂದು ತೋಚದೆ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗೆ 12,80,000 ರೂಪಾಯಿ ಹಾಕಿದ್ದೇನೆ’ ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾರೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಿಡಿಯಲು ಪೊಲೀಸರು ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾದರು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿ ರಿಜ್ವಾನ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನದ ನಿವಾಸಿಗಳಾದ ಆರಿಫ್ ಮತ್ತು ಜುನೈದ್ ಈ ಕೆಲಸಕ್ಕೆ ಬೆಂಬಲ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಅವರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ರಕ್ಷಿಸಲು ಜನರು ಅಲ್ಲಿ ಜಮಾಯಿಸಿದ್ದರು. ಆತನ ಮನೆಯಿಂದ ಆರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.