ನ್ಯೂಸ್ ನಾಟೌಟ್: ತಿಂಗಳ ಹಿಂದೆ ಬೇರೆ ದೇಶಗಳಿಂದ ಅಕ್ರಮವಾಗಿ ಬಂದು ಪ್ರೀತಿಗೆ ಬೀಳುವ ಪ್ರಸಂಗಗಳ ನಡುವೆ, ಭಾರತದಿಂದ ವಿವಾಹಿತ ಮಹಿಳೆಯೊಬ್ಬಳು ಪಾಕ್ ಪ್ರಿಯಕರನನ್ನು ಅರಸಿ ಅಲ್ಲಿಗೆ ತೆರಳಿ ವಿವಾಹವಾಗಿ ಬಾರಿ ಸುದ್ದಿಯಾಗಿದ್ದಳು.
ಮತಾಂತರವಾಗಿದ್ದ ಅಂಜು (Anju Love Story) ಪ್ರಕರಣ ಭಾರೀ ಸದ್ದು ಮಾಡಿತ್ತು. ಫೇಸ್ಬುಕ್ನಲ್ಲಿ ಪರಿಚಯನಾಗಿದ್ದ ಗೆಳೆಯನನ್ನು ಮದುವೆಯಾಗುವುದಕ್ಕಾಗಿ ರಾಜಸ್ಥಾನ ಮೂಲದ ಅಂಜು, ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ (Pakistan) ಹೋಗಿದ್ದಳು. ಅಲ್ಲದೇ, ಪಾಕ್ ಪ್ರಜೆಯನ್ನು ನಸ್ರುಲ್ಲಾ (Pak national Nasrullah) ಎಂಬಾತನನ್ನು ಮದುವೆಯಾಗಿ, ತನ್ನ ಹೆಸರನ್ನು ಫಾತಿಮಾ (Fatima) ಎಂದು ಬದಲಿಸಿಕೊಂಡಿದ್ದಳು. ಈಗ ಅದೇ ಫಾತಿಮಾ ಅಕಾ ಅಂಜು ಮತ್ತೆ ಪಾಕಿಸ್ತಾನ ತೊರೆದು ಭಾರತಕ್ಕೆ ವಾಪಸ್ಸಾಗಿದ್ದಾಳೆ ಎನ್ನಲಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಫೇಸ್ಬುಕ್ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಜೊತೆ ವಾಸಿಸುತ್ತಿದ್ದ 34 ವರ್ಷದ ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಮತ್ತೆ ವಾಪಸ್ ಬಂದಿದ್ದಾಳೆ. ಈ ವೇಳೆ, ತನಿಖಾ ಸಂಸ್ಥೆಗಳು ಅನೇಕ ಸುತ್ತಿನ ವಿಚಾರಣೆ ನಡೆಸಿದ ಬಳಿಕವಷ್ಟೇ ಆಕೆಗೆ ತನ್ನ ಮನೆಗೆ ಹೋಗಲು ಅವಕಾಶ ಕಲ್ಪಿಸಿದ್ದವು ಎನ್ನಲಾಗಿದೆ.
ಅವಳನ್ನು ಈಗ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಆಕೆ ದಿಲ್ಲಿಗೆ ತೆರಳಲಿದ್ದಾಳೆ ಎಂದು ಹೇಳಲಾಗುತ್ತಿದೆ.
34 ವರ್ಷದ ಮಹಿಳೆ ಅಂಜು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಳೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೇ ಆಕೆ ತನ್ನ ಹೆಸರನ್ನು ಅಂಜು ಬದಲಾಗಿ ಫಾತಿಮಾ ಎಂದು ಬದಲಿಸಿಕೊಂಡಿದ್ದಾಳೆ ಎಂದು ವರದಿಯಲ್ಲಿ ತಿಳಿಸಿದ್ದವು.
ರಾಜಸ್ಥಾನ ಮೂಲದ ಅಂಜು, ನಸ್ರುಲ್ಲಾಳನ್ನು ಪೇಶಾವರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸ್ಥಳೀಯ ನ್ಯಾಯಾಲಯದಲ್ಲಿ ತನ್ನ ಗಂಡನ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ವಿವಾಹವಾಗಿದ್ದಳು.
ಭಾರತಕ್ಕೆ ಹಿಂದಿರುಗುವ ಪ್ರಕ್ರಿಯೆ ನಡೆಯುತ್ತಿರುವುದರಿಂದ, ತಮ್ಮ ಕುಟುಂಬ ಮತ್ತು ಮಕ್ಕಳಿಗೆ ತೊಂದರೆ ನೀಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದರು ಮತ್ತು ಮುಂದಿನ ಕೆಲವು ದಿನಗಳಲ್ಲಿ ಪಾಕಿಸ್ತಾನಕ್ಕೆ ವಾಪಸ್ ಹೋಗುವ ಯೋಜನೆಗಳಿವೆ. ನಾನು ಸಂತೋಷವಾಗಿದ್ದೇನೆ ಎಂದು ಅಂಜು ಮಾಧ್ಯಮಗಳಿಗೆ ತಿಳಿಸಿದ್ದಾಳೆ.
ಉತ್ತರ ಪ್ರದೇಶದಲ್ಲಿ ಜನಿಸಿದ್ದ ಅಂಜು ರಾಜಸ್ಥಾನದ ಭಿವಡಿಯ ಅರವಿಂದ್ ಎಂಬುವರನ್ನು ವಿವಾಹವಾಗಿದ್ದರು. ಈ ದಂಪತಿಗೆ 15 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ. ಜುಲೈ ತಿಂಗಳಲ್ಲಿ ಅಂಜು ತಾನು ಜೈಪುರಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಬಳಿಕ ಆಕೆ ಪಾಕಿಸ್ತಾನದಲ್ಲಿರುವುದು ಮಾಧ್ಯಮಗಳ ಮೂಲಕ ತಿಳಿಯಿತು ಎಂದು ಅರವಿಂದ್ ತಿಳಿಸಿದ್ದರು. ಅಂಜು ಕಾನೂನು ಬದ್ಧವಾಗಿಯೇ ವಾಘಾ-ಅಟ್ಟಾರಿ ಗಡಿ ಮೂಲಕವೇ ಪಾಕಿಸ್ತಾನಕ್ಕೆ ಹೋಗಿದ್ದಳು ಎನ್ನಲಾಗಿದೆ. ಈಗ ಮತ್ತೆ ಭಾರತಕ್ಕೆ ಬಂದಿದ್ದಾಳೆ. ಅವಳು ಹಿಂದಿರುಗಿ ಬಂದ ಬಗ್ಗೆ ಮತ್ತಷ್ಟು ತನಿಖೆಗಳು ನಡೆಯುತ್ತಿವೆ ಎನ್ನಲಾಗಿದೆ.