ನ್ಯೂಸ್ ನಾಟೌಟ್ :ಅದೃಷ್ಟ ಒಲಿದು ಬಂದ್ರೆ ಬಡವನಾಗಿದ್ರೂ ಕೂಡ ರಾತ್ರೋ ರಾತ್ರಿ ಶ್ರೀಮಂತ ವ್ಯಕ್ತಿಯಾಗಬಲ್ಲ ಅನ್ನೋದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.ಕೆಲವರು ರೀಲ್ಸ್ ಮೂಲಕ ವೈರಲ್ ಸ್ಟಾರ್ಗಳಾಗಿರೋದು ಇದೆ.ಆದರೆ ಈ ವ್ಯಕ್ತಿ ಮಾತ್ರ ರಾತ್ರೋ ರಾತ್ರಿ ಶ್ರೀಮಂತನಾಗಿರೋದು ಸೋವಾ ಎನ್ನುವ ಮೀನುಗಳಿಂದಾಗಿ ಅನ್ನೋದು ಅಚ್ಚರಿಯ ಸಂಗತಿ.
ಹೌದು,ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಅರಬ್ಬಿ ಸಮುದ್ರದಿಂದ (Arabian Sea) “ಸೋವಾ” (Sowa Fish) ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದಾರೆ. ಈ ಮೀನುಗಳನ್ನು ಹಿಡಿದಿದ್ದೇ ತಡ ಸ್ಥಳೀಯವಾಗಿ ಅದಕ್ಕೆ ಭಾರಿ ಬೇಡಿಕೆ ಬಂದಿದೆ.ಇದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳಾಗಿದ್ದು, ಈ ಮೀನುಗಳ ಹರಾಜಿನಿಂದಾಗಿ ಅವರು ದಿನ ಬೆಳಗಾಗುವುದರಲ್ಲೇ ಕೋಟ್ಯಧಿಪತಿಯಾಗಿದ್ದಾರೆ.
ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಮೀನುಗಾರರು ತಮ್ಮ ಮೀನುಗಳನ್ನು ಹರಾಜು ಹಾಕಿದಾಗ ಸಂಪೂರ್ಣವಾಗಿ ಎಲ್ಲ ಮೀನುಗಳು ಸುಮಾರು 70 ದಶಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು ಅನ್ನುವ ವಿಚಾರ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.ಸೋವಾ ಮೀನನ್ನು ಬೆಲೆಬಾಳುವ ಮತ್ತು ಅಪರೂಪವೆಂದು ಪರಿಗಣಿಸಲಾಗುತ್ತದೆ.ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ.ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ.ಹೀಗಾಗಿ ಒಂದು ಮೀನು ಹರಾಜಿನಲ್ಲಿ ಸುಮಾರು 7 ದಶಲಕ್ಷ ರೂಪಾಯಿ ಪಡೆದಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸಾಮಾನ್ಯವಾಗಿ 20ರಿಂದ 49 ಕೆಜಿ ತೂಗುವ ಈ ಮೀನು ಅಂದಾಜು 1.5 ಮೀಟರ್ವರೆಗೂ ಬೆಳೆಯಬಲ್ಲದು. ಈ ಮೀನಿಗೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಶೇಷವಾದ ಬೇಡಿಕೆ ಇದೆ ಎಂದು ಹೇಳಲಾಗಿದೆ.ಸೋವಾ ಮೀನಿನ ಇನ್ನೊಂದು ವಿಶೇಷತೆ ಏನೆಂದರೆ ಇದು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿ ಈ ಮೀನನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎನ್ನಲಾಗಿದೆ.
ಈ ಬೃಹತ್ ಗೋಲ್ಡನ್ ಮೀನು ಸಿಕ್ಕಿದ್ದು ನಮ್ಮ ಪಾಲಿಗೆ ಅದೃಷ್ಟ.ಈ ಮೀನು ಹರಾಜು ಮೂಲಕ ಬಂದಿರುವ ಹಣವನ್ನು ತಮ್ಮ ಏಳು ಜನ ಸಿಬ್ಬಂದಿಯ ಜತೆ ಹಂಚಿಕೊಳ್ಳುವುದಾಗಿ ಮೀನಗಾರ ಹಾಜಿ ಬಲೋಚ್ ಹೇಳಿಕೊಂಡಿದ್ದಾರೆ. ತಜ್ಞರ ಪ್ರಕಾರ, ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ ಎಂದು ಹೇಳಲಾಗಿದೆ.