ನ್ಯೂಸ್ ನಾಟೌಟ್: ಯಾವುದೇ ಸುದ್ದಿಯಾದರೂ ಅದರ ಸತ್ಯಾಸತ್ಯತೆಯನ್ನು ಅರಿತು ವಿಮರ್ಷಿಸುವ ಬುದ್ಧಿವಂತಿಕೆಯ ಕೌಶಲ್ಯದ ಬರವಣಿಗೆ ಹೊಂದಿರುವ ಪತ್ರಕರ್ತರೇ ಇಂದು ವಿರಳ. ಹೆಚ್ಚಿನವರು ಬರೆಯಲು ಬಾರದವರೇ ಪತ್ರಕರ್ತರಾಗಿ ಸಮಾಜದ ಕಣ್ಣಿಗೆ ದೊಡ್ಡವರಂತೆ ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ ಮತ್ತು ಮಾರಕ. ಅಂಥಹವರ ಸಾಲಿಗೆ ಈಗ ರಾಜ್ಯದ ಖಾಸಗಿ ಟಿವಿ ಮಾಧ್ಯಮವೂ ಒಂದು ಸೇರಿಕೊಂಡಿರುವುದು ನೋವಿನ ಸಂಗತಿ.
ಹೌದು, ಕರಾವಳಿಯ ಬಹು ಸಂಖ್ಯಾತ ಒಕ್ಕಲಿಗ ಗೌಡರ ಮನಸ್ಸಿಗೆ ನೋವಾಗುವಂತೆ ರಾಜ್ಯದ ಖಾಸಗಿ ಚಾನೆಲ್ ವೊಂದು ಕಪೋಲಕಲ್ಪಿತ ವರದಿ ಪ್ರಕಟಿಸಿದೆ. ಬಹು ಸಂಖ್ಯಾತ ಒಕ್ಕಲಿಗ ಗೌಡರ ಸಮುದಾಯದ ಮನಸ್ಸನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ವಿಪರ್ಯಾಸವಾಗಿದೆ ಎಂದು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಟೀಕಿಸಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ತೆರೆಮರೆಯ ಸಿದ್ಧತೆ ಕರಾವಳಿಯಲ್ಲೂ ನಡೆಯುತ್ತಿದೆ. ಈ ಸಲ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದರೆ ಯಾರಿಗೆ ಸಿಗಬಹುದು ಅನ್ನುವ ಚರ್ಚೆ ಜೋರಾಗಿದ್ದರೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಯಾರೂ ಅನ್ನುವುದರ ಕುರಿತೇ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಕುರಿತಂತೆ ಚರ್ಚೆಯೊಂದು ರಾಜ್ಯದ ಚಾನೆಲ್ ವೊಂದರಲ್ಲಿ ನಡೆಯುತ್ತಿತ್ತು. ಈ ವೇಳೆ ವಿವಿಧ ಜಾತಿವಾರು ಲೆಕ್ಕಾಚಾರದ ಅಂಕಿ-ಅಂಶಗಳನ್ನು ನೀಡಲಾಗಿತ್ತು. ಇದರಲ್ಲಿ ಒಕ್ಕಲಿಗ ಗೌಡ ಸಮುದಾಯದ ಜನರು ಕರಾವಳಿಯಲ್ಲಿ 80,000 ದಷ್ಟು ಅಷ್ಟೇ ಇರುವುದು ಎಂದು ಅಂಕಿ-ಅಂಶ ಆಧಾರಿತ ವರದಿಯನ್ನು ಟಿವಿ ಡಿಸ್ ಪ್ಲೇನಲ್ಲಿ ಪ್ರಕಟಿಸಿತು. ಆದರೆ ವಾಸ್ತವವಾಗಿ 3.70 ಲಕ್ಷಕ್ಕೂ ಅಧಿಕ ಒಕ್ಕಲಿಗ ಗೌಡ ಸಮುದಾಯದ ಮತಗಳು ಇವೆ. ಆದರೆ ಕಡಿಮೆ ಒಕ್ಕಲಿಗರು ಇದ್ದಾರೆ ಅನ್ನುವ ವರದಿಯ ಅಂಕಿ-ಅಂಶವನ್ನು ಆ ಮಾಧ್ಯಮಕ್ಕೆ ನೀಡಿದವರು ಯಾರು..? ಅನ್ನುವುದು ಬಹಳಷ್ಟು ಒಕ್ಕಲಿಗ ಸಮುದಾಯದ ನಾಯಕರನ್ನು ಕೆರಳಿಸಿತ್ತು. ಇದರಿಂದ ಅಸಮಾಧಾನಗೊಂಡ ನಾಯಕರು ಇದೀಗ ಪತ್ರಿಕಾಗೋಷ್ಟಿ ಕರೆದು ನಮ್ಮ ಸಂಖ್ಯೆ ಇಷ್ಟು ದೊಡ್ಡಮಟ್ಟದಲ್ಲಿ ಇದೆ. ಹೀಗಿರುವಾಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ ಅನ್ನುವುದನ್ನು ತೋರಿಸುವುದರ ಹಿಂದೆ ಇರುವ ಉದ್ದೇಶ ಏನು..? ಅನ್ನುವುದನ್ನು ಪ್ರಶ್ನಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ, “ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಅಭ್ಯರ್ಥಿಗಳನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಈ ಹಿಂದೆ ಬೆರಳೆಣಿಕೆಯ ಜನರಿಗೆ ದಕ್ಷಿಣ ಕನ್ನಡದಿಂದ ಅವಕಾಶ ಸಿಕ್ಕಿದೆ. ನಂತರದ ಚುನಾವಣೆಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎನ್ನುವ ಅಸಮಾಧಾನವೂ ಸಮುದಾಯದ ಕಡೆಯಿಂದ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಪ್ರಬಲ ಸಮುದಾಯದ ಹಿನ್ನೆಲೆಯುಳ್ಳ ಒಕ್ಕಲಿಗ ಗೌಡ ಸಮುದಾಯಕ್ಕೆ ಸೂಕ್ತ ಅವಕಾಶಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಮುಂದುವರಿದು ಮಾತನಾಡಿದ ಅವರು, “ನಾಡಿನ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಅದಮ್ಯ ಕೊಡುಗೆ ನೀಡಿದ ಒಕ್ಕಲಿಗ ಸಮುದಾಯದ ನಾಯಕರು ಕೂಡ ಇದ್ದಾರೆ ಅನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು. ರಕ್ಷಿತ್ ಪುತ್ತಿಲ, ಮಹೇಶ್ ನಡುತೋಟ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.