ನ್ಯೂಸ್ ನಾಟೌಟ್: ಒಂದೇ ಸರ್ಕಾರಿ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಗುದ್ದಾಟ ನಡೆಸಿ, ಇಬ್ಬರೂ ಅಧಿಕಾರಿಗಳು ಪ್ರತ್ಯೇಕ ಕುರ್ಚಿ ಹಾಕಿಕೊಂಡು ಕುಳಿತ ಘಟನೆ ಯಾದಗಿರಿ (Yadgir) ತಾಲೂಕು ಸಮಾಜ ಕಲ್ಯಾಣ ಇಲಾಖೆ (Social Welfare Department) ಕಚೇರಿಯಲ್ಲಿ ನಡೆದಿದೆ.
ನಗರದ ಹೊಸಳ್ಳಿ ಕ್ರಾಸ್ ಬಳಿಯಿರುವ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಂಗಪ್ಪ ಪೂಜಾರಿ ಹಾಗೂ ಡಿ.ರಾಜಕುಮಾರ್ ಎಂಬ ಇಬ್ಬರು ಅಧಿಕಾರಿಗಳ ಮಧ್ಯೆ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಇದರಿಂದ ಇಲಾಖೆಯ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದಿರುವ ಸಾರ್ವಜನಿಕರು ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳನ್ನ ಕಂಡು ಗೊಂದಲಕ್ಕೆ ಸಿಲುಕಿದ್ದಾರೆ.
ಸಂಗಪ್ಪ ಅವರು ಫೆ.1 ರಿಂದ ಅ.16ರ ವರೆಗೆ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ರಾಜಕುಮಾರ್ ಇದೇ ಹುದ್ದೆಗೆ ಸರ್ಕಾರದಿಂದ ಆದೇಶ ತಂದು ಅಕ್ಟೋಬರ್ 16 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ಸಂಗಪ್ಪ ಪೂಜಾರಿ ಅವಧಿಗೂ ಮುನ್ನವೆ ನನ್ನ ಜಾಗಕ್ಕೆ ಮತ್ತೊಬ್ಬರಿಗೆ ಆದೇಶ ಆಗಿದೆ ಎಂದು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ (High Court) ವಿಭಾಗೀಯ ಪೀಠದ ಮೊರೆ ಹೋಗಿದ್ದರು ಎನ್ನಲಾಗಿದೆ.
ಕೋರ್ಟ್ ಸಂಗಪ್ಪ ಪರ ತೀರ್ಪು ನೀಡಿ, ಹುದ್ದೆಯಲ್ಲಿ ಮುಂದೆವರಿಯುವಂತೆ ಆದೇಶ ಹೊರಡಿಸಿದೆ. ಇದೇ ವೇಳೆ ರಾಜಕುಮಾರ್ ಗೆ ಆಗಿರುವ ಆದೇಶವನ್ನ ಕೋರ್ಟ್ ರದ್ದು ಮಾಡಿದೆ ಎಂದು ಸಂಗಪ್ಪ ವಾದಿಸುತ್ತಿದ್ದು, ನನಗೆ ಸರ್ಕಾರದಿಂದ ಆದೇಶ ಇದೆ ಎಂದು ರಾಜಕುಮಾರ್ ಕಚೇರಿಯಲ್ಲಿ ಅಕ್ಕ-ಪಕ್ಕ ಕುರ್ಚಿ ಹಾಕಿ ಕುಳಿತು ಸಾರ್ವಜನಿಕರ ಸೇವೆಗೆ ಕಿರಿಕಿರಿ ಉಂಟಾಗುವಂತೆ ಮಾಡಿದ್ದಾರೆ.