ನ್ಯೂಸ್ ನಾಟೌಟ್ : ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೇಶದಲ್ಲಿ ಐಟಿ ಕಾನೂನಿನ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (Ministry of Electronics and Information Technology) ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಜತೆಗೆ, ಅಸ್ತಿತ್ವದಲ್ಲಿರುವ ಕಾನೂನನ್ನು ಪಾಲಿಸುವಂತೆ ಪುನರುಚ್ಚರಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಡಿ ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸಚಿವಾಲಯ ಪುನರುಚ್ಚರಿಸಿದೆ. ಈ ಕಾನೂನಿನಡಿ, ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಕೃತ್ಯಗಳನ್ನು ಎಸಗುವುದು ಮತ್ತು ವಂಚನೆ ಎಸಗುವುದಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸರ್ಕಾರ ಹೇಳಿದೆ.
ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಬಳಕೆದಾರರ ಖಾಸಗಿತನವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಅದಕ್ಕೆ ಸಂಬಂಧಿಸಿದ ವಿಚಾರವನ್ನು ಶ್ರದ್ಧೆಯನ್ನು ಗಮನಿಸಬೇಕು ಎಂದು ‘ಐಟಿ ಇಂಟರ್ಮೀಡಿಯೇಟರ್ ರೂಲ್ಸ್ನ: ನಿಯಮ 3(1)(b)(vii)’ರಲ್ಲಿ ಉಲ್ಲೇಖಿಸಲಾಗಿದೆ. ನಿಯಮಗಳು, ನಿಬಂಧನೆಗಳು ಮತ್ತು ಗೌಪ್ಯತಾ ನೀತಿಯನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಪಾಲಿಸಬೇಕು. ಬಳಕೆದಾರರಿಗೆ ಇನ್ನೊಬ್ಬ ವ್ಯಕ್ತಿಯನ್ನು ಸೋಗು ಹಾಕುವ ಯಾವುದೇ ವಿಷಯವನ್ನು ಹೋಸ್ಟ್ ಮಾಡದಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ತಂತ್ರಜ್ಞಾನಕ್ಕೆ ಸಂಬಂಧಿಸಿದ ದುರ್ಬಳಕೆ ದೂರುಗಳು ಬಂದಲ್ಲಿ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು. ಮಾರ್ಫ್ ಮಾಡಿದ ಕಂಟೆಂಟ್ ಅನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿಯಮ 3(2)(ಬಿ)ಯಲ್ಲಿ ಉಲ್ಲೇಖಿಸಲಾಗಿದೆ.