ನ್ಯೂಸ್ ನಾಟೌಟ್: ಮಾಜಿ CM ಡಿ.ವಿ ಸದಾನಂದ ಗೌಡರಿಗೆ 5 ತಿಂಗಳ ಕುರಿಮರಿ ಗಿಫ್ಟ್ ಸಿಕ್ಕಿದೆ. ಗಿಫ್ಟ್ ಕೊಟ್ಟಿದ್ದು ಯುವ ರೈತ. ಮೊದ ಮೊದಲು ಗಿಫ್ಟ್ ಬೇಡ ಅಂದ ಗೌಡರು ನಂತರ ಖುಷಿ ಖುಷಿಯಿಂದ ನಗುನಗುತ್ತಲೇ ಸ್ವೀಕರಿಸಿದರು. ಈ ಸರ್ಪ್ರೈಸ್ ಗಿಫ್ಟ್ ಬರಪರಿಸ್ಥಿತಿ ಅಧ್ಯಯನ ನಡೆಸಲೆಂದು ಆಗಮಿಸಿದ್ದ ವೇಳೆ ಡಿ.ವಿ. ಸದಾನಂದಗೌಡರಿಗೆ ಸಿಕ್ಕಿದೆ.
ಮಂಡ್ಯ ಜಿಲ್ಲೆಯ ಅರಕನಹಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿಯಿಂದ ಜಾನುವಾರು ಕಳೆದುಕೊಂಡಿದ್ದ ರೈತರ ಮನೆಗಳಿಗೆ ಡಿ.ವಿ. ಸದಾನಂದಗೌಡ ಭೇಟಿ ನೀಡಿದ್ದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದ ಅವರು ರೈತರಿಗೆ ಭರವಸೆ ನೀಡಿದ್ದರು. ಇದೇ ಸಂದರ್ಭ ಅಲ್ಲಿನ ಗ್ರಾಮದ ಯುವ ರೈತ ಎಚ್.ಆರ್. ರಂಜಿತ್ ಎಂಬಾತ 5 ತಿಂಗಳ ಕುರಿಮರಿಯನ್ನು ಸದಾನಂದಗೌಡರಿಗೆ ಉಡುಗೊರೆ ನೀಡಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಹೋಬಳಿಗೆ ಹೋಗಿದ್ದಾಗ ಅರಕನಹಳ್ಳಿ ಗ್ರಾಮದ ಯುವ ರೈತನೋರ್ವ ಕುರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಆನಂದರಾದ ಸದಾನಂದಗೌಡರು, “ನೀವೇ ಚೆನ್ನಾಗಿ ಸಾಕಿ ಬೆಳೆಸಿ, ಇದೇ ಕುರಿ ಮಾಂಸದೂಟಕ್ಕಾಗಿ ತಮ್ಮ ಗ್ರಾಮಕ್ಕೆ ಬರುವುದಾಗಿ” ಭರವಸೆ ನೀಡಿದರು.
ನಂತರ ಸ್ಥಳದಲ್ಲಿದ್ದ ಬಿಜೆಪಿ ಮುಖಂಡರುಗಳು ರಂಜಿತ್ ತಮ್ಮ ಮೇಲೆ ವಿಶ್ವಾಸವಿಟ್ಟು ಕುರಿಯನ್ನು ನೀಡಿದ್ದಾರೆ. ಅದು ನಿಮ್ಮ ಮನೆಗೇ ತೆಗೆದುಕೊಂಡು ಹೋಗಿ ಸಾಕಿ ಎಂದು ಸಲಹೆ ನೀಡಿದರು. ಇದಕ್ಕೆ ಸದಾನಂದಗೌಡರು ಸಮ್ಮತಿ ಸೂಚಿಸಿದರು. ನಂತರ ಬೆಂಗಳೂರಿನಲ್ಲಿರುವ ತಮ್ಮ ಆಪ್ತ ಸಹಾಯಕರ ವಶಕ್ಕೆ ಒಪ್ಪಿಸುವಂತೆ ಬಿಜೆಪಿ ಮುಖಂಡರು ಸಲಹೆ ನೀಡಿದ ನಂತರ ನಾಳೆ ಬೆಂಗಳೂರಿಗೆ ಕುರಿಮರಿಯನ್ನು ಕೊಂಡೊಯ್ಯಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮನ್ಮುಲ್ ನಿರ್ದೇಶಕರಾದ ಎಸ್.ಪಿ. ಸ್ವಾಮಿ, ರೂಪ, ಜಿಲ್ಲಾ ಸಮಿತಿ ಮುಖಂಡ ಎಂ. ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವದಾಸ್ ಸತೀಶ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಮುಖಂಡರಾದ ಎಂ.ಸಿ. ಸಿದ್ದರು, ಬಿ.ಸಿ. ಮಹೇಂದ್ರ ಇತರರು ಇದ್ದರು.
ಮಂಡ್ಯದಲ್ಲಿ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಸದಾನಂದ ಗೌಡ,ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು.ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ.ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೆ, ಕೇಂದ್ರ ಸರ್ಕಾರದಲ್ಲಿ ಏಳು ವರ್ಷ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೆ. ರಾಜ್ಯ ಅಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ರಾಜಕೀಯದಲ್ಲಿ ಇಷ್ಟು ಮಾತ್ರ ಸಾಕಲ್ಲವೇ ಎಂದರು.