ನ್ಯೂಸ್ನಾಟೌಟ್: ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಹೊಸ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ವಾಹನಗಳು ಹೆಚ್ಚಿದದಂತೆ ಅಪಘಾತ ಪ್ರಮಾಣ ಕೂಡ ಏರಿಕೆಯಾಗಿದೆ. ಸುರಕ್ಷಿತ ವಾಹನ ಚಾಲನೆಗಾಗಿ ಹಲವಾರು ಸಂಚಾರಿ ನಿಯಮಗಳನ್ನು ಜಾರಿಗೆ ತಂದರೂ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗುವ ಹೊಸ ವಾಹನಗಳು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಿದ್ದರೂ ಹಳೆಯ ವಾಹನಗಳಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅಪಘಾತಗಳ ಸಂಖ್ಯೆ ತಗ್ಗಿಸುವುದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ವಾಹನಗಳಲ್ಲಿ ಮತ್ತೊಂದು ಸುರಕ್ಷಾ ಸೌಲಭ್ಯ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಬಲ್ಲ ಕೂಲಿಷನ್ ವಾರ್ನಿಂಗ್ ಸಿಗ್ನಲ್ ಸೌಲಭ್ಯವನ್ನು ಮುಂಬರುವ ಎಲ್ಲಾ ಮಾದರಿಯ ಹೊಸ ವಾಹನಗಳಲ್ಲೂ ಕಡ್ಡಾಯವಾಗಿ ಜೋಡಣೆ ಮಾಡಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಫೀಚರ್ಸ್ ಕಡ್ಡಾಯಕ್ಕೆ ಅಂತಿಮ ದಿನದ ಗಡುವು ಪ್ರಕಟಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಮೂವಿಂಗ್ ಆಫ್ ಇನ್ಫಾರ್ಮೇಷನ್ ಸಿಸ್ಟಮ್ (MOIS) ಸೌಲಭ್ಯವು ಸಂಭವನೀಯ ಅಪಘಾತ ಪ್ರಕರಣಗಳನ್ನು ತಗ್ಗಿಸಲಿದ್ದು, ಇದು ವಾಹನ ಚಾಲನೆ ವೇಳೆ ಆಕಸ್ಮಿಕವಾಗಿ ವಿರುದ್ಧ ದಿಕ್ಕಿನಲ್ಲಿ ನುಗ್ಗುವ ಇತರ ವಾಹನಗಳ ಮಾಹಿತಿ ಜೊತೆಗೆ ಪಾದಾಚಾರಿಗಳ ಮಾಹಿತಿ ಒದಗಿಸುವ ಮೂಲಕ ಅಪಘಾತಗಳನ್ನು ತಡೆಯಬಲ್ಲದು. ಸೆನ್ಸಾರ್ ಮೂಲಕ ಕಾರ್ಯನಿರ್ವಹಿಸುವ ಕೂಲಿಷನ್ ಕಂಟ್ರೋಲ್ ಸಿಸ್ಟಂ ಸೌಲಭ್ಯವು ಅಪಘಾತಕ್ಕೂ ಮುನ್ನ ಚಾಲಕನಿಗೆ ಎಚ್ಚರಿಕೆಯ ಸಂದೇಶ ರವಾನಿಸಲಿದೆ. ಈ ವೇಳೆ ಚಾಲಕ ಅಪಘಾತದಿಂದ ಪಾರಾಗಲು ಸಹಕಾರಿಯಾಗುವುದರ ಜೊತೆಗೆ ಸಾವು ನೋವಿನ ಪ್ರಮಾಣವನ್ನು ತಗ್ಗಿಸಬಹುದಾಗಿದೆ.
ಹೊಸ ಸುರಕ್ಷಾ ಸೌಲಭ್ಯವು ಇತ್ತೀಚೆಗೆ ಹಲವು ಹೊಸ ಕಾರುಗಳಲ್ಲಿ ಜೋಡಣೆ ಮಾಡಲಾಗಿದ್ದು, ಎಡಿಎಎಸ್ ಸೇಫ್ಟಿ ಸೂಟ್ ಹೊಂದಿರುವ ಕಾರುಗಳಲ್ಲಿ ಈ ಸೌಲಭ್ಯವನ್ನು ನೋಡಬಹುದಾಗಿದೆ. ಆದರೆ ಕೇಂದ್ರ ಸರ್ಕಾರವು ಇದೀಗ ಪ್ರತಿ ಕಾರು ಮಾದರಿಗಳೂ ಮತ್ತು ವಾಣಿಜ್ಯ ವಾಹನಗಳಲ್ಲೂ ಹೊಸ ಫೀಚರ್ಸ್ ಜೋಡಣೆ ಕಡ್ಡಾಯಕ್ಕೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಹೊಸ ನಿಯಮ ಅಳವಡಿಕೆ ಜಾರಿಗಾಗಿ ಈಗಾಗಲೇ ಕರಡು ಚೌಕಟ್ಟನ್ನು ಅಂತಿಮಗೊಳಿಸಲಾಗಿದ್ದು, ಮುಂಬರುವ 2024 ಏಪ್ರಿಲ್ 1ರಿಂದಲೇ ಕಡ್ಡಾಯವಾಗಿ ಜಾರಿಗೆ ಬರುವ ಸಾಧ್ಯತೆಗಳಿವೆ.
ಕಳೆದ ವರ್ಷ 2022ರ ಅವಧಿಯಲ್ಲಿ ದೇಶಾದ್ಯಂತ ಬರೋಬ್ಬರಿ 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಬರೋಬ್ಬರಿ 1,68,491 ಜನ ಪ್ರಾಣಕಳೆದುಕೊಂಡಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಅತಿವೇಗದ ಚಾಲನೆ ಎಂದು ಗುರುತಿಸಲಾಗಿದ್ದು, ತದನಂತರದಲ್ಲಿ ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ, ಸಂಚಾರ ನಿಯಮ ಪಾಲಿಸದಿರುವುದು ಕೂಡಾ ಪ್ರಮುಖ ಕಾರಣಗಳಾಗಿವೆ. ಇದರಲ್ಲಿ ಮತ್ತೊಂದು ಆತಂಕ ಮಾಹಿತಿಯೆಂದರೆ ಕಳೆದ ವರ್ಷದ ಅಪಘಾತದಲ್ಲಿ ಮರಣ ಹೊಂದಿದವರಲ್ಲಿ ಶೇ. 40 ರಷ್ಟು ಜನ 18 ರಿಂದ 35 ವಯಸ್ಸಿನವರು ಎಂದು ಅಪಘಾತಗಳ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಕಳೆದ ವರ್ಷ ಪ್ರತಿ ಗಂಟೆಗೆ ದೇಶಾದ್ಯಂತ ಬರೋಬ್ಬರಿ 19 ಮಂದಿ ಅಪಘಾತದಲ್ಲಿ ಪ್ರಾಣಕಳೆದುಕೊಂಡಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಪಘಾತಗಳ ಸಂಖ್ಯೆ ದಾಖಲಾಗಿದ್ದರೆ ಉತ್ತರಪ್ರದೇಶದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಜನ ಪ್ರಾಣಕಳೆದುಕೊಂಡಿದ್ದಾರೆ.