ನ್ಯೂಸ್ ನಾಟೌಟ್: ನಕ್ಸಲರ ಹಾವಳಿ ಕಡಿಮೆಯಾಗುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಗುಂಪು ಕಾಣಿಸಿಕೊಂಡಿದೆ. ಇದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ. ಈ ಬಗ್ಗೆ ವಿಚಾರ ಹೊರಬರುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ನಕ್ಸಲರ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಏನಿದು ಘಟನೆ..?: ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮ. ಇಲ್ಲಿ ತಡರಾತ್ರಿ ಒಂಟಿ ಮನೆಯೊಂದಕ್ಕೆ ಓರ್ವ ಮಹಿಳೆ ಒಳಗೊಂಡಂತೆ ಐವರ ತಂಡವಿದ್ದ ಅಪರಿಚಿತರು ಬಾಗಿಲು ತಟ್ಟಿದ್ದಾರೆ. ಎಲ್ಲರು ಕೂಡ ಖಾಕಿ ಬಟ್ಟೆಯನ್ನು ಧರಿಸಿದ್ದರು, ಮಾತ್ರವಲ್ಲ ಅವರ ಕೈಯಲ್ಲಿ ಮಾರಕಾಸ್ತ್ರಗಳಿದ್ದವು. ಈ ಬಗ್ಗೆ ಮನೆ ಮಾಲೀಕ ಪುಂಜಾಜೆ ಮನೆ ಮಾಲೀಕ ಜೋಸಿ ಆಂಟನಿ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾರೆ. ನಾವು ವೇಣೂರಿನಿಂದ ಬಂದಿರುವ ಪೊಲೀಸರು ಎಂದು ಹೇಳುವ ಮೂಲಕ ತಂಡ ಬಾಗಿಲು ತೆರೆಯಿರಿ ಎಂದು ಹೇಳಿದೆ. ಆದರೆ ಮನೆಯವರು ಬಾಗಿಲು ತೆರೆಯಲಿಲ್ಲ. ಇದರಿಂದ ಸಿಟ್ಟುಗೊಂಡು ಹಾರೆಯಲ್ಲಿ ಮನೆಯ ಬಾಗಿಲನ್ನು ಮುರಿಯುವ ಪ್ರಯತ್ನ ನಡೆಸಲಾಯಿತು ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಇದೀಗ ಸ್ಥಳಕ್ಕೆ ವೇಣೂರು ಪೊಲೀಸರು ಹಾಗೂ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಂದವರು ನಕ್ಸಲರು ಇರಬಹುದು ಅನ್ನುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.