ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದ ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗಳ (Murugha Shree) ಮತ್ತೆ ಇಂದು(20/ನವೆಂಬರ್) ಬಂಧನವಾಗಿದೆ ಎಂದು ವರದಿ ತಿಳಿಸಿದೆ.
2ನೇ ಕೇಸಲ್ಲಿ ಶ್ರೀಗಳ ಅರೆಸ್ಟ್ ಆಗಿದೆ. ಇಂದು ಮಧ್ಯಾಹ್ನ ಕೋರ್ಟ್ ಶ್ರೀಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಈ ಬೆನ್ನಲ್ಲೇ ಪೊಲೀಸರು ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿ ಶ್ರೀಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಜೆ 4.30ಗೆ ಶ್ರೀಗಳನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
1ನೇ ಪೊಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ (HighCourt) ಷರತ್ತುಬದ್ಧ ಜಾಮೀನು ಹಿನ್ನೆಲೆಯಲ್ಲಿ ಮುರುಘಾಶ್ರೀ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಮುರುಘಾಶ್ರೀ ಮತ್ತೆ ಬಂಧನದ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶ್ರೀ ಪರ ವಕೀಲ ಉಮೇಶ್ ವಾದಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ್ದ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದು, ಇದೀಗ ಶ್ರೀಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ .