ನ್ಯೂಸ್ ನಾಟೌಟ್ : ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ಇಂದು(ನ.16) 13 ತಿಂಗಳ ನಂತರ ಜೈಲಿನಿಂದ ಬಿಡುಗಡೆ ಆಗಿದ್ದು, ಈ ಬಗ್ಗೆ ಒಡನಾಡಿ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.
ಕಾರಾಗೃಹದಿಂದ ಹೊರಬಂದ ಸ್ವಾಮೀಜಿ ಭಕ್ತರ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರಿಂದ ದಾವಣಗೆರೆಯತ್ತ ತೆರಳಿದರು ಎನ್ನಲಾಗಿದೆ.
ಮುರುಘಾ ಶ್ರೀ ವಿರುದ್ಧ ಎರಡು ಪೋಕ್ಸೋ ಪ್ರಕರಣ ದಾಖಲಾಗಿತ್ತು. ನ.8 ರಂದು ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ನಡೆದಿದ್ದು, ಆ ಬಳಿಕ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ದಾವಣಗೆರೆ ಕಡೆ ಹೊರಟಿದ್ದಾರೆ. ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್ಪೋರ್ಟ್ ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ. ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ (Murugha shree) ಜಾಮೀನು ಸಿಕ್ಕಿದೆ ಎಂದು ಒಡನಾಡಿ (Odanadi) ಸಂಸ್ಥೆಯ ಮುಖ್ಯಸ್ಥ ಪರಶು ಆರೋಪಿಸಿದ್ದಾರೆ. ಸಂಸ್ಥೆಯ ಇನ್ನೋರ್ವ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿ, ಮುರುಘಾ ಶ್ರೀ ಜಾಮೀನು ರದ್ದಿಗೆ ಕಾನೂನು ಹೋರಾಟ ಮಾಡುತ್ತೇವೆ. ಸ್ವಾಮೀಜಿ ಬಿಡುಗಡೆ ವಿಚಾರ ಕೇಳಿ ಸಂತ್ರಸ್ತ ಮಕ್ಕಳು ಭಯಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.