ನ್ಯೂಸ್ ನಾಟೌಟ್ : ಇತ್ತೀಚೆಗೆ ಹಲವು ವಿಕೃತ ಮತ್ತು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಅದಕ್ಕೆ ಅತಿಯಾದ ಮೊಬೈಲ್ ಬಳಕೆ ಮತ್ತು ಅನಾರೋಗ್ಯಕರ ದೃಶ್ಯಗಳ ವೀಕ್ಷಣೆಯೂ ಕಾರಣವಾಗಿರಬಹುದು. ಹಾಗೆಯೇ ವಾಮಾಚಾರಕ್ಕಾಗಿ ಮೃತದೇಹವನ್ನು ಸ್ಮಶಾನದಿಂದ ಹೊರತೆಗೆದು ಕೂದಲು ಹಾಗೂ ಬಟ್ಟೆಯನ್ನು ತೆಗೆದುಕೊಂಡಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬಟ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಕಳೆದ 20 ದಿನಗಳ ಹಿಂದೆ ಮೂರುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಹಮಿದ ಆತ್ಮಹತ್ಯೆಗೆ ಶರಣಾಗಿದ್ದಳು. ನಂತರ ಇಬ್ಬರ ಶವವನ್ನು ಹೆಬ್ಬಟ ಕ್ರಾಸ್ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ನವೆಂಬರ್ 19 ರಂದು ಶವಗಳನ್ನು ಹೊರತೆಗೆದು ಕೂದಲು ಹಾಗೂ ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿದ್ದಾರೆ ಎಂದು ಮೃತ ಹಮಿದ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.
ಹಮಿದ ಪತಿ ಶೊಯಬ್ ಸೂಚನೆಯಂತೆ ಮಗುವಿನ ಶವ ಹೊರತೆಗೆದು ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ತಾಯಿ ಹಾಗೂ ಮಗಳ ಶವವನ್ನು ಸ್ಮಶಾನಕ್ಕೆ ತೆರಳಿ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನವೆಂಬರ್ 19 ರಂದು ಬೆಳ್ಳಂಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿ, ತಡವಾಗಿ ವಾಪಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ವಾಮಾಚಾರ ಮಾಡಲೆಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ.
ಪತಿ ಶೊಯಬ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದೆಂದು ಪೋಷಕರು ಆರೋಪಿಸಿದ್ದರು. ಅದರಂತೆ ಆತ್ಮಹತ್ಯೆ ಬಳಿಕವೂ ಪತಿ ಹೀಗೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಂತ್ಯಸಂಸ್ಕಾರದ ವೇಳೆ ಶವಗಳಿಗೆ ಹಾಕಿದ್ದ ಬಟ್ಟೆಗಳು ಸಮಾಧಿಯ ಪಕ್ಕದಲ್ಲೇ ಪತ್ತೆಯಾಗಿದೆ. ಇಬ್ಬರ ಶವಗಳು ಇದೆಯೋ, ಇಲ್ಲವೋ ಎಂಬುದು ಪೋಷಕರಲ್ಲಿ ಆತಂಕ ಮನೆ ಮಾಡಿದೆ ಎಂದು ವರದಿ ತಿಳಿಸಿದೆ.