ನ್ಯೂಸ್ ನಾಟೌಟ್: ಅಪರಿಚಿತರು ಲಷ್ಕರ್-ಎ-ತೊಯ್ಬಾ ಕಮಾಂಡರ್ (Lashkar e Taiba Terrorist) ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾದಲ್ಲಿ ನಡೆದಿದೆ.
ಒಂದು ವಾರದ ಅವಧಿಯಲ್ಲಿ ನಡೆದ ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಎರಡನೇ ಹತ್ಯೆ ಇದಾಗಿದ್ದು, ಬಜೌರ್ ಜಿಲ್ಲೆಯಲ್ಲಿ ಬೈಕ್ನಲ್ಲಿ ಬಂದ ಪಾಕಿಸ್ತಾನದ ಅಪರಿಚಿತ ವ್ಯಕ್ತಿಗಳು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ್ ಖಾನ್ ಅಲಿಯಾಸ್ ಘಾಜಿ (Akram Ghazi) 2018-2020 ರ ಅವಧಿಯಲ್ಲಿ ಲಷ್ಕರ್ಗೆ ಉನ್ನತ ನೇಮಕಾತಿದಾರರಲ್ಲಿ ಒಬ್ಬನಾಗಿದ್ದ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಗೆ ಅನೇಕ ಬ್ಯಾಚ್ಗಳಲ್ಲಿ ನುಸುಳಿದ ಹಲವಾರು ಭಯೋತ್ಪಾದಕರ ಜವಾಬ್ದಾರಿಯನ್ನು ಹೊತ್ತಿದ್ದ.
ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರ ಸುಂಜ್ವಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್ನನ್ನು ಭಾನುವಾರ ಅಪಹರಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದನ ಮಾಡಲಾಯಿತು.
ಘಾಜಿ ಹತ್ಯೆಯಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಸೇರಿದಂತೆ ಸ್ಥಳೀಯ ವಿರೋಧಿಗಳ ಪಾತ್ರ ಇರಬಹುದು ಎನ್ನಲಾಗಿದೆ. ಘಾಜಿ ಲಷ್ಕರ್ನ ಕೇಂದ್ರ ನೇಮಕಾತಿ ಸೆಲ್ನ ಪ್ರಮುಖ ಸದಸ್ಯನಾಗಿದ್ದ. ಭಾರತದ ವಿರುದ್ಧ ದ್ವೇಷ ತುಂಬಿದ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.
ಇತ್ತೀಚಿನ ದಿನಗಳಲ್ಲಿ ಲಷ್ಕರ್ನ ಉನ್ನತ ಕಾರ್ಯಕರ್ತನ ಎರಡನೇ ಹತ್ಯೆ ಇದಾಗಿದೆ. ಸೆಪ್ಟೆಂಬರ್ನಲ್ಲಿ ಎಲ್ಇಟಿ ಕಮಾಂಡರ್ ರಿಯಾಜ್ ಅಹ್ಮದ್ನ ಪಿಒಕೆಯ ರಾವಲಕೋಟ್ನಲ್ಲಿರುವ ಅಲ್ ಖುದ್ದೂಸ್ ಮಸೀದಿಯ ಹೊರಗೆ ಹತ್ಯೆ ನಡೆದಿತ್ತು.
ಕಳೆದ ಒಂದೇ ವರ್ಷದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದ 17 ಉಗ್ರರು ಬೇರೆ ಬೇರೆ ದೇಶಗಳಲ್ಲಿ ಸಾವಿಗೀಡಾಗಿದ್ದಾರೆ. ವಿಶೇಷವೆಂದರೆ ಇವರೆಲ್ಲಾ ಪಾಕಿಸ್ತಾನ, ಅಫ್ಘಾನಿಸ್ತಾನ, ಕೆನಡಾ ಹಾಗೂ ಬ್ರಿಟನ್ನಲ್ಲಿ ನಾನಾ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಹುತೇಕರು ನಿಗೂಢವಾಗಿ ಇಲ್ಲವೇ ಅನಾಮಿಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಭಾರತಕ್ಕೆ ಬೇಕಾದ ಲಷ್ಕರ್ ಎ ತೊಯ್ಬಾ ಉಗ್ರ ಕೈಸರ್ ಫಾರೂಖ್ನನ್ನು ಭಾನುವಾರ ಪಾಕ್ನಲ್ಲಿ ಹತ್ಯೆಗೈದ ಬೆನ್ನಲ್ಲೇ ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಭಾರತಕ್ಕೆ ಬೇಕಾದ ಉಗ್ರರ ಸಾವು ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಏಕೆ? ಇದರ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಚರ್ಚೆಗಳು ನಡೆದಿವೆ, 2022ರ ಮಾರ್ಚ್ ನಂತರ ಈವರೆಗೆ ಈ ಹತ್ಯೆಗಳು ನಡೆದಿವೆ ಎನ್ನಲಾಗಿದೆ.