ನ್ಯೂಸ್ ನಾಟೌಟ್ :ಪ್ರೀತಿಸುತ್ತಿದ್ದ ಹುಡುಗಿ ತನ್ನ ಜತೆಗೆ ಸುತ್ತಾಡಲು ಬಂದಿಲ್ಲವೆಂದು ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ಮಂಗಳೂರಿನ ಖಾಸಗಿ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ.
ಸುಳ್ಯ ಮೂಲದ ವಿವೇಕ್ (18) ಎಂಬ ಯುವಕ ಈ ಕೃತ್ಯ ಎಸಗಿದ್ದು, ಸ್ಥಳೀಯರು ಹಿಡಿದು ಆತನಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮಂಗಳೂರಿನಲ್ಲಿ ಲೈಟಿಂಗ್ ಕೆಲಸ ಮಾಡುತ್ತಿದ್ದು ಕಾಲೇಜ್ ಬಳಿಯ ವಿದ್ಯಾರ್ಥಿನಿಯರ ಪಿಜಿ ಹಾಸ್ಟೆಲ್ ನಲ್ಲಿ ಕೆಲಸಕ್ಕಿದ್ದ ಯುವತಿಯ ಜೊತೆಗೆ ಪ್ರೀತಿ ಹೊಂದಿದ್ದ ಎನ್ನಲಾಗಿದೆ. ಗುರುವಾರ ಸಂಜೆ ಆಕೆಗೆ ಫೋನ್ ಮಾಡಿ, ಹೊರಗೆ ಸುತ್ತಾಡಲು ಬರುವಂತೆ ಕೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.
ಅದಕ್ಕೆ ಉತ್ತರಿಸಿದ ಯುವತಿ ‘ನಿನ್ನ ಜೊತೆಗೆ ಬರುವುದಿಲ್ಲ’ ಎಂದು ಹೇಳಿ ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ಪದೇ ಪದೇ ಕರೆ ಮಾಡಿದರೂ ಕೆಲಸ ಇದೆಯೆಂದು ಹೇಳಿ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಿದ್ದಾನೆ. ಘಟನೆಯಿಂದ ಹಾಸ್ಟೆಲ್ ಕಿಟಕಿ, ಗಾಜು ಒಡೆದು ಹೋಗಿದ್ದು ದಾಂಧಲೆಗೆ ಯತ್ನಿಸಿದ ಯುವಕನನ್ನು ಕೂಡಲೇ ಸ್ಥಳೀಯರು ಹಿಡಿದು ಥಳಿಸಿದ್ದಾರೆ.
ರಾತ್ರಿ ಹತ್ತು ಗಂಟೆ ವೇಳೆಗೆ ಯುವಕನನ್ನು ಹಿಡಿದು ಥಳಿಸಿ ಕೂಡಿಹಾಕಿದ್ದರು. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಲ್ಲು ತೂರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.