ನ್ಯೂಸ್ ನಾಟೌಟ್: ಪಾರಂಪರಿಕ ನಾಗಸ್ವರ ವಾದಕರಾಗಿದ್ದ ಕಾಪು ಸಾವಿರ ಸೀಮೆಯ ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ (56) ಅವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಜಲೀಲ್ ಸಾಹೇಬ್ ಅವರು ಭಾನುವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ಬಲಿ ಹೊರಡುವ ಸಂದರ್ಭದಲ್ಲಿ ನಾಗಸ್ವರ ಸೇವೆ ನೀಡಿದ್ದರು. ಸೋಮವಾರ ಮುಂಜಾನೆ ನಾಗಸ್ವರದೊಂದಿಗೆ ಮನೆಯಿಂದ ಹೊರಗೆ ಹೋಗಿದ್ದು, ಹೋಟೆಲ್ ನಲ್ಲಿ ಚಹಾ ಕುಡಿಯಲು ಕುಳಿತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು, ಪತ್ನಿ, ಮಗಳು, ಸಹೋದರ ಸಹಿತ ಅಪಾರ ಬಂಧು ಬಳಗಳನ್ನು ಅಗಲಿದ್ದಾರೆ.
ಕಾಪು ಸಾವಿರ ಸೀಮೆಯ ಒಡೆಯ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿ, ಕಾಪು ಮೂರನೇ ಮಾರಿಗುಡಿ ಸಹಿತ ಕಾಪು ಮಾರಿಯಮ್ಮ ದೇವಿ ಸನ್ನಿಧಿ ಹಾಗೂ ಕಾಪು ಸಾವಿರ ಸೀಮೆಯ ಹೆಚ್ಚಿನ ದೇವಸ್ಥಾನ, ಗರಡಿ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ನೀಡುತ್ತಿದ್ದರು. ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಅವರಿಂದ ಬಳುವಳಿಯಾಗಿ ಬಂದ ನಾಗಸ್ವರ ವಾದನವನ್ನು ಕಳೆದ 40 ವರ್ಷಗಳಿಂದ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದರು.