ನ್ಯೂಸ್ ನಾಟೌಟ್ : ಗೃಹಲಕ್ಷ್ಮಿ ಯೋಜನೆಯಡಿ 7.9 ಲಕ್ಷ ಮಹಿಳೆಯರಿಗೆ ಹಣ ಪಾವತಿ ಬಾಕಿ ಇದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಖಾತೆಗೆ ಬಾಕಿ ತಿಂಗಳ ಮೊತ್ತವು ಸೇರಿಸಿ ಇನ್ನು 15 ದಿನಗಳೊಳಗೆ ಸಹಾಯಧನ ಪಾವತಿ ಮಾಡಲಾಗುತ್ತದೆ ಎಂದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಬಿಡಬ್ಲ್ಯುಎಸ್ಎಸ್ ಬಿ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ದೋಷ, ಸಿಬ್ಬಂದಿಗಳ ತೊಡಕಿನ ಕುರಿತು ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 1,16, 65,000 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಆಕೌಂಟ್ ಗೆ – 2,119 ಕೋಟಿ ಹಣ ಹಾಕಲಾಗಿದ್ದು, ಈ ಮೂಲಕ ಶೇಕಡ 97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ ಎಂದು ಸಚಿವರು ವಿವರಿಸಿದರು. ಆಗಸ್ಟ್ ತಿಂಗಳಲ್ಲಿ ಐದು ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟೆಂಬರ್ ನಲ್ಲಿ ಶೇ.82 ಕುಟುಂಬಗಳಿಗೆ ಹಣ ಹಾಕಲಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಆಕೌಂಟ್ ನಲ್ಲಿ ಉಳಿದಿದೆ.
ಇನ್ನು ಅಕ್ಟೋಬರ್ ನಲ್ಲಿ 2400 ಕೋಟಿ ರೂ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಇನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ, ಇದರ ಜೊತೆಗೆ ಆಧಾರ್ ಲಿಂಕ್ ಆಗದಿರುವುದಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇಂದು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಇನ್ನು 15 ದಿನದೊಳಗೆ ಎಲ್ಲರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಹೋಗಲಿದೆ ಎಂದು ಭರವಸೆ ನೀಡಿದ್ದಾರೆ.