ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಜೋರಾಗಿದೆ.ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ಫೇಕ್ ಐಡಿ ಮೂಲಕ ಯಾಮಾರಿಸೋದು,ಫೋನ್ ಪೇ,ಗೂಗ್ಲ್ ಪೇ ಮೂಲಕ ವಂಚನೆ ಹೀಗೆ ಹತ್ತು ಹಲವಾರು ತಂತ್ರಗಳನ್ನು ಖದೀಮರು ಹೆಣೆಯುತ್ತಲೇ ಇರುತ್ತಾರೆ.
ಇದೀಗ ಮಡಿಕೇರಿಯ ಕುಶಾಲನಗರದಲ್ಲೊಂದು ಬ್ಯಾಂಕ್ ಗ್ರಾಹಕನೊಬ್ಬನನ್ನು ಕಳ್ಳರು ಉಪಾಯದಿಂದ ಯಾಮಾರಿಸಿರುವ ಘಟನೆ ವರದಿಯಾಗಿದೆ.ಬ್ಯಾಂಕ್ ಲೋನ್ ಮಾಡಿ ಸಾಲದಿಂದ ಬಳಲಿದ್ದ ವ್ಯಕ್ತಿ ಹೇಗಾದರೂ ಮಾಡಿ ಈ ಸಾಲವನ್ನು ಮುಗಿಸಲೇ ಬೇಕೆಂದು ನಿರ್ಧಾರ ಮಾಡಿದ್ದಾರೆ.ಈ ವೇಳೆ ಹಣ ಕಟ್ಟಲು ಹೆಂಡ್ತಿಯ ಚಿನ್ನವನ್ನು ಅಡವಿಟ್ಟು ಎರಡು ಲಕ್ಷ ರೂ. ಹಣವನ್ನು ಮನೆಗೆ ಕೊಂಡೊಯ್ಯುತ್ತಿದ್ದರು.ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಖದೀಮರು ಗಮನ ಬೇರೆಡೆ ಸೆಳೆದು (Attention divert)ಅಷ್ಟೂ ಹಣವನ್ನು ಲಪಟಾಯಿಸಿದ (Money Snatching) ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ (Kushalagara town) ನಡೆದಿದೆ. ಮೂಲತಃ ಪಿರಿಯಾಪಟ್ಟಣ ತಾಲೂಕು ಬೆಣಗಾಲ್ ವ್ಯಾಪ್ತಿಯ ಆನಂದನಗರದ ನಿವಾಸಿ ಓಹಿಲೇಶ್ (52) ಎಂಬವರು ಹಣ ಕಳೆದುಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ಓಹಿಲೇಶ್ ಅವರು ಬ್ಯಾಂಕ್ನಿಂದ ಲೋನ್ ಪಡೆದಿದ್ದರು. ಅದರ ಕಂತು ಪಾವತಿಸಲು ಆಗದೆ ಪರದಾಡಿದ್ದರು. ಕೊನೆಗೆ ಬ್ಯಾಂಕ್ನಿಂದ ಒತ್ತಡ ಮೇಲಿಂದ ಮೇಲೆ ಬರುತ್ತಲೇ ಇತ್ತು.ಹೇಗಾದರೂ ಮಾಡಿ ಹಣ ಹೊಂದಿಸುವ ಅನಿವಾರ್ಯತೆ ಕೂಡ ಎದುರಾಗಿತ್ತು.ಆಗ ಅವರು ಪತ್ನಿಯ ಚಿನ್ನವನ್ನು ಅಡವಿಟ್ಟು ಬ್ಯಾಂಕ್ ಲೋನ್ ಪಾವತಿಸಲು ಮುಂದಾದರು.
ಈ ಸಂದರ್ಭ ಕುಶಾಲನಗರಕ್ಕೆ ಹೋಗಿದ್ದರು. ಅಲ್ಲಿ ಒಂದು ಕಡೆ ಚಿನ್ನವನ್ನು ಅಡವಿಟ್ಟು ಓಹಿಲೇಶ್ ಅವರು ತಮ್ಮ ಆತ್ಮೀಯರೊಬ್ಬರನ್ನು ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು. ಅಲ್ಲಿಂದ ಅದೇ ಬೈಕ್ನಲ್ಲಿ ಮುಂದೆ ಸಾಗಿದ್ದರು. ಈ ವೇಳೆ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬಳಿ ನಿಂತಿದ್ದ ಕೆಲವರು ಇವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದೆ ಎಂದು ಹೇಳಿದ್ದಾರೆ.
ಆಗಷ್ಟೇ ಹಣ ಹಿಡಿದುಕೊಂಡು ಬಂದಿದ್ದ ಓಹಿಲೇಶ್ ಅವರು ಹೇಳಿದ್ದು,ನಿಜವಿರಬಹುದೇನೋ ಎಂದು ನಂಬಿದ್ದಾರೆ. ಬೈಕ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ಹೇಳಿದಂತೆ ಹಣವೂ ಬಿದ್ದಿತ್ತು. ಆ ಹಣವನ್ನು ಸಂಗ್ರಹಿಸಿ ಮರಳಿ ಬೈಕ್ ಬಳಿ ಬರುವಷ್ಟು ಹೊತ್ತಿಗೆ ಅವರ ಬೈಕ್ನಲ್ಲಿದ್ದ ಹಣ ಕಾಣೆಯಾಗಿತ್ತು. ಅವರು ಹಣವನ್ನು ಬೈಕ್ನ ಪರ್ಸ್ನಲ್ಲಿಟ್ಟಿದ್ದರು. ವಂಚಕರು ಪಾಸ್ ಬುಕ್ ಸಹಿತ 2 ಲಕ್ಷ 9 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದರು.
ಬಹುಶಃ ಕೆಲವೊಂದಷ್ಟು ನೋಟುಗಳನ್ನು ಕಳ್ಳರೇ ಬೀಳಿಸಿ ಓಹಿಲೇಶ್ ಅವರ ದಿಕ್ಕು ತಪ್ಪಿಸಿದ್ದಾರೆ ಎನ್ನುವ ಅನುಮಾನವಿದೆ.ಇದೀಗ ಖದೀಮರು ಬೈಕ್ ನಿಂದ ಹಣ ಎಗರಿಸುವ ದೃಶ್ಯ ಸಮೀಪದ ಖಾಸಗಿ ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಖದೀಮರನ್ನು ಪತ್ತೆ ಹಚ್ಚುವುದು ಕಷ್ಟವೇನಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ನಾಲ್ವರ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಖದೀಮರ ಪತ್ತೆಗೆ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಎಸ್ಪಿ ಹಣದ ವ್ಯವಹಾರ ನಡೆಸುವಾಗ, ಹಣ ಹಿಡಿದುಕೊಂಡು ಹೋಗುವಾಗ ಬಹಳ ಎಚ್ಚರವಾಗಿರಬೇಕು.ಈ ಜಾಲ ಮೈಸೂರು, ಮಂಗಳೂರು ಭಾಗದಲ್ಲೂ ಹರಡಿರುವುದಾಗಿ ಎಸ್ ಹೇಳಿದ್ದಾರೆ.
ಈ ಕೃತ್ಯವನ್ನು ಯಾರು ಮಾಡಿದರು ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ, ಸಿಸಿಟಿವಿ ಆಧರಿಸಿ ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.ಓಹಿಲೇಶ್ ಅವರ ಚಲನವಲನಗಳನ್ನು ಸರಿಯಾಗಿ ಗಮನಿಸಿಯೇ ಈ ವಂಚಕರು ತಮ್ಮ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.ಅವರು ಚಿನ್ನ ಅಡವಿಟ್ಟು ಹಣ ಪಡೆದಿರುವುದು, ಅದನ್ನು ಬೈಕ್ನ ಎದುರಿನ ಪರ್ಸ್ನಲ್ಲಿಟ್ಟಿದ್ದು, ಬಸ್ ಸ್ಟಾಂಡ್ಗೆ ಹೋಗಿ ಮರಳಿದ್ದು, ಬರುವ ದಾರಿಯ ಬಗ್ಗೆ ಸ್ಪಷ್ಟತೆ ಇದ್ದವರೇ ಈ ಕೃತ್ಯ ನಡೆಸಿರುವುದು ಎನ್ನುವ ಅನುಮಾನ ವ್ಯಕ್ತವಾಗಿದೆ.