ನ್ಯೂಸ್ ನಾಟೌಟ್ : ಅನ್ಯ ಸಮುದಾಯದ ಹುಡುಗನನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ತಂದೆ ತನ್ನ ಮಗಳ ಮೇಲೆ ಅಮಾನುಷವಾಗಿ ವರ್ತಿಸಿ, ಬಲವಂತವಾಗಿ ಕೀಟನಾಶಕ ಕುಡಿಸಿರುವ ಘಟನೆ ವರದಿಯಾಗಿದೆ. ಪರಿಣಾಮ ಜೀವನ್ಮರಣದ ಹೋರಾಟ ನಡೆಸುತ್ತಿದ್ದ 14 ವರ್ಷದ ಬಾಲಕಿ ಮಂಗಳವಾರ ಆಸ್ಪತ್ರೆಯಲ್ಲಿ ದುರಂತ ಅಂತ್ಯವನ್ನೇ ಕಂಡಿದ್ದಾಳೆ.
ಅಕ್ಟೋಬರ್ 29 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದ್ದು, ಆಲುವಾ ಪಶ್ಚಿಮ ಪೊಲೀಸರು 43 ವರ್ಷದ ಕರುಮಲ್ಲೂರು ಮೂಲದ ಆರೋಪಿಯನ್ನು ಬಂಧಿಸಿ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.ಆಕೆ ಪೀಡಿಯಾಟ್ರಿಕ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸಂಜೆ 4.48ಕ್ಕೆ ಬಾಲಕಿಯ ಬಾರದ ಲೋಕಕ್ಕೆ ತೆರಳಿದ್ದಾಳೆ.
ಎಫ್ಐಆರ್ನ ಪ್ರಕಾರ, ಕಾಡುಂಗಲ್ಲೂರಿನ ಅದೇ ಶಾಲೆಯಲ್ಲಿ ಓದುತ್ತಿರುವ ಮತ್ತು ಬೇರೆ ಸಮುದಾಯಕ್ಕೆ ಸೇರಿದ ಹುಡುಗನೊಂದಿಗೆ ತನ್ನ ಮಗಳ ಸಂಬಂಧವಿದೆಯೆಂದು ತಿಳಿದು , ತಂದೆ ಆ ಸಂಬಂಧವನ್ನು ನಿಲ್ಲಿಸುವಂತೆ ಬಾಲಕಿಗೆ ಸೂಚನೆ ಕೊಟ್ಟಿದ್ದಾರೆ. ಮಾತ್ರವಲ್ಲ,ಆಕೆಯ ಮೊಬೈಲ್ ಫೋನ್ ಕೂಡ ವಶಪಡಿಸಿಕೊಂಡಿದ್ದಾರೆ. ಆದಾಗ್ಯೂ, ಒಂಬತ್ತನೇ ತರಗತಿಯ ಹುಡುಗಿ, ಆತನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಳು ಮತ್ತು ಇನ್ನೊಂದು ಫೋನ್ ಬಳಸಿ ಹುಡುಗನೊಂದಿಗೆ ಮಾತನಾಡುತ್ತಿದ್ದಳು ಎನ್ನಲಾಗಿದೆ.
ಇದರಿಂದ ಸಿಟ್ಟಾದ ತಂದೆ ಕಬ್ಬಿಣದ ರಾಡ್ನಿಂದ ಆಕೆಯ ಕೈ ಮತ್ತು ಕಾಲುಗಳಿಗೆ ಥಳಿಸಿದ್ದಾನೆ ಮತ್ತು ಕೀಟನಾಶಕವನ್ನು ಬಲವಂತವಾಗಿ ಕುಡಿಸಿದ್ದಾನೆ. ಮೂರ್ಛೆ ಹೋದ ಬಾಲಕಿಯನ್ನು ಕುಟುಂಬದ ಇತರ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಮರುದಿನ ಆಸ್ಪತ್ರೆಯಿಂದ ಪೊಲೀಸರಿಗೆ ಬಾಲಕಿ ಬಗ್ಗೆ ಮಾಹಿತಿ ಬಂದಿದೆ. ಆಸ್ಪತ್ರೆಯಲ್ಲಿಯೇ ಬಾಲಕಿಯ ಹೇಳಿಕೆ ದಾಖಲಿಸಿಕೊಂಡ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.