ನ್ಯೂಸ್ ನಾಟೌಟ್ : ಸರೋವರ ಕ್ಷೇತ್ರವೆಂದೇ ಭಾರಿ ಪ್ರಸಿದ್ಧಿ ಪಡೆದಿರುವ ಕೇರಳದ ಅನಂತಪುರ (Ananthapura) ಕೆರೆಯಲ್ಲಿರುವ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯವು ಕಳೆದ ಒಂದು ವಾರದಿಂದ ಇದೀಗ ಜನರ ಆಕರ್ಷಣೆಯ ಕೇಂದ್ರವಾಗಿದೆ.ಇದಕ್ಕೆ ಕಾರಣ ಅಲ್ಲಿನ ಕೆರೆಯಲ್ಲಿರುವ ಮರಿ ಬಬಿಯಾ..! ಹೌದು, ‘ಬಬಿಯಾ’ (Babiya) ಹೆಸರಿನ ಮೊಸಳೆ ದೈವೈಕ್ಯ ಬಳಿಕ ಅದೇ ಕೆರೆಯಲ್ಲಿ ಅದೇ ದಿನ ಮರಿ ಮೊಸಳೆ ಇತ್ತೀಚೆಗೆ ಕಾಣಿಸಿಕೊಂಡು ಭಾರಿ ಸಂಚಲನ ಸೃಷ್ಟಿಯಾಗಿತ್ತು.ಇದೊಂದು ಪವಾಡವೆಂದೇ ಹಲವರು ಮಾತನಾಡಿಕೊಳ್ಳುತ್ತಿದ್ದರು.ಇದೀಗ ಕಾಣಿಸಿಕೊಂಡ ಮರಿ ಮೊಸಳೆಗೂ (Crocodile) ‘ಬಬಿಯಾ’ ಎಂದೇ ನಾಮಕರಣ ಮಾಡಲಾಗಿದೆ..!
ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೊಸದಾಗಿ ಕಂಡು ಬಂದಿರುವ ಮರಿ ಮೊಸಳೆಗೂ ಬಬಿಯಾ ಹೆಸರು ಇಡುವುದಾಗಿ ಘೋಷಿಸಲಾಯಿತು. ಅದರಂತೆ ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ ಅವರು ‘ಬಬಿಯಾ’ ಎಂದು ನಾಮಕರಣ ಮಾಡಿದರು.ಅಷ್ಟೇ ಅಲ್ಲ, ಸಾವನ್ನಪ್ಪಿದ್ದ ಬಬಿಯಾಗೆ ನೀಡಿದಂತೆ, ಹೊಸ ‘ಬಬಿಯಾ’ಗೂ ನೈವೇದ್ಯ ಅರ್ಪಿಸಲು ತೀರ್ಮಾನಿಸಲಾಯಿತು. ಅದರಂತೆ ಶುಕ್ರವಾರ ಮಧ್ಯಾಹ್ನದಿಂದಲೇ ನೈವೇದ್ಯ ಸಮರ್ಪಿಸಲಾಯಿತು. ದೇವರಿಗೆ ನವಕ ಕಲಶಾಭಿಷೇಕ ನಡೆಸಿ ಹಾಲು-ಪಾಯಸ ನೈವೇದ್ಯವಾಗಿ ಅರ್ಪಿಸಲಾಯಿತು. ಬಳಿಕ ಇದೇ ನೈವೇದ್ಯವನ್ನು ಮೊಸಳೆಗೆ ನೀಡಲಾಯಿತು.ಇನ್ನು ನೈವೇದ್ಯ ಸಮರ್ಪಿಸುತ್ತಿದ್ದಂತೆ ಮರಿ ಮೊಸಳೆಯು ಸಾರ್ವಜನಿಕರಿಗೆ ದರ್ಶನ ನೀಡಿತು. ಮೊಸಳೆ ಸಂಬಂಧಿತ ಉಪನ್ಯಾಸವೂ ದೇಗುಲದಲ್ಲಿ ನಡೆದು, ಸಾಹಿತಿ ಶಂ.ನಾ. ಅಡಿಗ ಅವರು ಮಾತನಾಡಿದರು.ಮರಿ ಮೊಸಳೆಗೂ ಬಬಿಯಾ ಹೆಸರಿಟ್ಟಿದ್ದು,ಹಲವು ಭಕ್ತರಿಗೆ ಖುಷಿ ಕೊಟ್ಟಿದೆ.ಹಲವು ಭಕ್ತರು ಮತ್ತೆ ಆ ಮರಿ ಮೊಸಳೆಗೆ ಬಬಿಯಾ ಎಂದೇ ಹೆಸರಿಡಿ ಅನ್ನುವ ಒತ್ತಾಯವನ್ನೂ ಮಾಡಿದ್ದರು.ಈ ಎಲ್ಲ ವಿಚಾರವನ್ನು ಗಮನಿಸಿದಾಗ ನಂಬೋದಕ್ಕು ಅಸಾಧ್ಯವಾಗುತ್ತಿದೆ ಎಂದು ಭಕ್ತರು ಹೇಳುತ್ತಿದ್ದಾರೆ.ಇದು ಪವಾಡವಲ್ಲದೇ ಇನ್ನೇನೂ ಅಲ್ಲವೆಂದು ಹಲವು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.