ನ್ಯೂಸ್ ನಾಟೌಟ್ : ತುಳುನಾಡಿನ ಜಾನಪದ ಕ್ರೀಡೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ “ಬೆಂಗಳೂರು ಕಂಬಳ -ನಮ್ಮ ಕಂಬಳ’ಕ್ಕಾಗಿ ಸಕಲ ಸಿದ್ಧತೆಗಳು ನಡಿತಿವೆ.ಇದರ ಪೂರ್ವಭಾವಿಯಾಗಿ ಬುಧವಾರದಂದು ಕುದಿ ಕಂಬಳಕ್ಕೆ ಚಾಲನೆ ನೀಡಲಾಗುತ್ತಿದೆ.ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಧರ್ಮಪತ್ನಿ , ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇಂದು ಬೆಳಗ್ಗೆ ಅರಮನೆ ಮೈದಾನದ 5ನೇ ಗೇಟ್ನಲ್ಲಿ ನಿರ್ಮಿಸಲಾದ ಕಣದಲ್ಲಿ ಕುದಿ ಕಂಬಳಕ್ಕೆ ಚಾಲನೆ ನೀಡಿದರು.ಈ ಅದ್ದೂರಿ ಕಂಬಳಕ್ಕೆ ಕೆಲವೇ ದಿನಗಳು ಬಾಕಿ ಇರೋದ್ರಿಂದ ಮದುಮಗಳಂತೆ ಶೃಂಗಾರಗೊಳಿಸುವುದಕ್ಕಾಗಿ ಕಂಬಳ ಸಮಿತಿ ಹಗಲಿರುಳು ಶ್ರಮಿಸುತ್ತಿದೆ.ವೇದಿಕೆ, ಆಸನ, ಪಾರ್ಕಿಂಗ್ ವ್ಯವಸ್ಥೆ ಜತೆಗೆ ಸ್ಟಾಲ್ಗಳ ನೋಂದಣಿ ಕೆಲಸವು ಭರದಿಂದ ನಡೆಯುತ್ತಿದೆ.
ಅಗತ್ಯವಿರುವ ವ್ಯವಸ್ಥೆ:ಝಗಮಗಿಸುವ ಲೈಟಿಂಗ್ಸ್ , ಅಲಂಕಾರ ಜತೆಗೆ ಕೋಣಗಳು ಓಡುವ ಕರೆ (ಟ್ರ್ಯಾಕ್)ಗೆ ಪ್ರಾರಂಭ ಹಾಗೂ ಕೊನೆಯಲ್ಲಿ ಬಣ್ಣ ಬಳಿಯುವ ಕೆಲಸಗಳು ನಡೆಯುತ್ತಿದೆ. ಕಂಬಳ ರಾತ್ರಿಯೂ ನಡೆಯುವುದರಿಂದ ಅಲ್ಲಲ್ಲಿ ಹೈಮಾಸ್ಟ್ ದೀಪಗಳನ್ನು ಜೋಡಿಸಲಾಗಿದೆ. ಜತೆಗೆ ಕರೆಯ ಸುತ್ತಮುತ್ತಲಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ವ್ಯವಸ್ಥೆಗಳು ನಡೆಯುತ್ತಿವೆ.ಕುದಿ ಕಂಬಳ:ಕರಾವಳಿ ಭಾಗದಲ್ಲಿ ಕಂಬಳ ಸ್ಪರ್ಧಾಕೂಟ ಸಮೀಪಿಸುತ್ತಿದ್ದಂತೆ ಸ್ಪರ್ಧೆ ನಡೆಯುವ ಒಂದು ತಿಂಗಳ ಮೊದಲು ಕುದಿ ಕಂಬಳ ಎಂಬ ಕೋಣಗಳ ಓಟದ ರಿಹರ್ಸಲ್ ಅಥವಾ ಓಟದ ತಾಲೀಮು ಮಾಡಲಾಗುತ್ತದೆ. ಈ ವೇಳೆ ಕೋಣಗಳಿಗೆ ಹುರಿದುಂಬಿಸುವ ಸಲುವಾಗಿ ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ಮಂಗಳೂರಿನಿಂದ ಆಗಮಿಸಿದ ಎರಡು ಜೋಡಿ ಕೋಣಗಳು ಕುದಿ ಕಂಬಳದ ಟ್ರಯಲ್ಗೆ ಇಳಿಯುತ್ತಿದೆ.ಅಶೋಕ್ ರೈ ಮಾತು: ಇದು ರಾಜಕೀಯ ಕಾರ್ಯಕ್ರಮವಲ್ಲ, ಹೀಗಾಗಿ ಎಲ್ಲ ಪಕ್ಷದವರನ್ನು ಆಹ್ವಾನಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ಕಂಬಳ ಕರಾವಳಿ ಭಾಗದ ದೊಡ್ಡ ಕ್ರೀಡೆಯಾಗಿದೆ. ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಒಂದಾಗಿದ್ದಾರೆ. ಸಿದ್ದಿ ಜನಾಂಗದವರು ಬಂದು ಬ್ರಿಜ್ ಭೂಷಣ್ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಕೋರಿದ್ದರು. ಆದರೆ ಮೊನ್ನೆಯೇ ತಾನು ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದಾಗಿ ತಿಳಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ, ಅದನ್ನು ಬದಲು ಮಾಡುತ್ತೇವೆ ಎಂದಿದ್ದಾರೆ.