ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಹಾಗೂ ಮನೆ ಯಜಮಾನಿಯರ ಬಹುನೀರಿಕ್ಷೆಯ ಗೃಹ ಲಕ್ಷ್ಮಿ ಯೋಜನೆಯಡಿ (Gruhalakshmi scheme) ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ. ಇದನ್ನು ಫಲಾನುಭವಿಗಳ ಖಾತೆಗೆ ನೇರ ಜಮಾ ಮಾಡಲಾಗುತ್ತಿದೆ. ಇದೀಗ ಈ ಯೋಜನೆ ಮತ್ತಷ್ಟು ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಸಣ್ಣ ಬದಲಾವಣೆಯೊಂದನ್ನು ಮಾಡಲಾಗಿದೆ.ಇನ್ನು ಮುಂದೆ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಮುನ್ನ 2000 ರೂ.ಯನ್ನು ಮೊದಲು ಚಾಮುಂಡೇಶ್ವರಿಯ (Chamundeshwari Devi) ಹುಂಡಿಗೆ ಕಾಣಿಕೆಯಾಗಿ ಸಮರ್ಪಣೆ ಮಾಡಿ ಬಳಿಕ ಫಲಾನುಭವಿಗಳ ಖಾತೆಗೆ ಹಾಕಲು ನಿರ್ಧರಿಸಲಾಗಿದೆ.
ಹೌದು, ನಾಡದೇವತೆ ಎಂದೇ ಖ್ಯಾತಿ ಹೊಂದಿರುವ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ 2000 ರೂ. ಸಲ್ಲಿಸುವ ಮೂಲಕ ದೇವಿಗೆ ಹರಕೆಯ ರೂಪದಲ್ಲಿ ನೀಡಬೇಕು ಎಂಬ ಸಲಹೆಯೊಂದು ಬಂದಿದೆ. ಇದೀಗ ಪ್ರತಿ ತಿಂಗಳು ಕೂಡಾ ದೇವಿಗೆ ಕಾಣಿಕೆ ಸಲ್ಲಿಸಬೇಕು ಎಂಬ ಸಲಹೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಒಪ್ಪಿದ್ದಾರೆ. ಸದ್ಯವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.ಇದಕ್ಕೆ ಕಾಂಗ್ರೆಸ್ ಮೇಲ್ಮನೆ ಸದಸ್ಯರಾಗಿರುವ ದಿನೇಶ್ ಗೂಳಿಗೌಡ (MLC Dinesh Gooligowda) ಸಲಹೆ ನೀಡಿದ್ದಾರೆ. ಈ ಸಂಬಂಧ ಪತ್ರ ಬರೆದ ಅವರಿಗೆ ಸರಿಯಾದ ಸ್ಪಂದನೆಯೂ ಸಿಕ್ಕಿದೆ.ಇವರು ಬರೆದ ಪತ್ರದಲ್ಲಿ ಏನಿದೆಯೆಂದರೆ ‘ರಾಜ್ಯ ಕಾಂಗ್ರೆಸ್ ಸರ್ಕಾರದ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ ಮುಖ್ಯವಾಗಿ ಗೃಹಿಣಿಯರಿಗೆ ವರದಾನವಾಗಿದೆ. ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷದ ವತಿಯಿಂದ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ವಿಶೇಷವಾಗಿ ಬೇಡಿಕೊಳ್ಳಲಾಗಿತ್ತು. ಪಕ್ಷದ ಐದು ಗ್ಯಾರಂಟಿಗಳ ಕಾರ್ಡ್ ಅನ್ನು ಇಟ್ಟು ದೇವಿಯ ಬಳಿ, ಶಕ್ತಿ ಕೊಡು ಎಂದು ಕೋರಿಕೆಯನ್ನಿಡಲಾಗಿತ್ತು. ಆ ಸಂದರ್ಭದಲ್ಲಿ ಹರಕೆಯನ್ನು ನಾಡದೇವತೆ ಬಳಿ ಮಾಡಿಕೊಳ್ಳಲಾಗಿತ್ತು.ಪಕ್ಷ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಈಡೇರಿಸುವ ವಾಗ್ದಾನವನ್ನೂ ಮಾಡಲಾಗಿತ್ತು ಎಂದಿದ್ದರು.ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ಪರಿಣಾಮ 135 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಪಡೆದು ಈಗ ಜನಪರ ಜನಪ್ರಿಯ ಆಡಳಿತವನ್ನು ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ, ಆಶೀರ್ವಾದ ನೀಡಿ ಹರಸಿರುವ ಜಗನ್ಮಾತೆ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ಪೂಜೆ ಸಲ್ಲಿಸಿ ಆಗಸ್ಟ್ 30ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಾಬೀತಾಗಿತ್ತು. ಈಗ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ನಿಖರವಾಗಿ ತಲಾ 2 ಸಾವಿರ ರೂ. ಹಣ ಜಮಾ ಆಗುತ್ತಿರುವುದು ಖುಷಿಯ ವಿಚಾರವಾಗಿದೆ. ಅದೇ ರೀತಿ ಪ್ರತಿ ತಿಂಗಳ ಕಂತನ್ನು ಯಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಧಿಗೂ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಪಾವತಿಯಾಗುವಂತೆ ವ್ಯವಸ್ಥೆ ಮಾಡಬಹುದು. – ಎಂದು ದಿನೇಶ್ ಗೂಳಿಗೌಡ ಅವರು ಪತ್ರದಲ್ಲಿ ಬರೆದಿದ್ದಾರೆ.